ಬೇಕು ಅನ್ನೋದೆಲ್ಲ ಇಲ್ಲಿ
ಸಾಕು ಅನಿಸೋವಷ್ಟು ಸಿಕ್ರೆ
ಕೈಯ್ಯ ಎತ್ತಿ ನೋಡು ಒಮ್ಮೆ
ಕಲ್ಪವೃಕ್ಷ ನೀನೇ ಆದ್ರೆ
ಮಾತು ಮಾತಿನಲ್ಲೂ ಮುತ್ತು
ಪೋಣಿಸಿಟ್ಟ ಹಾಗೆ ಕಂಡ್ರೆ
ಗರ್ವದಿಂದ ಹೇಳು
ಕರುನಾಡು ನನ್ನದು
ಕನ್ನಡ ಭಾಷೆ ನನ್ನದು!!
ಮಣ್ಣ ಬಗೆದು ಸೀಳಿದಾಗ
ಚಿನ್ನವನ್ನೇ ತುಂಬಿ ಕೊಟ್ರೆ
ಬಿತ್ತಿಕೊಂಡ ಕನಸಿಗೆಲ್ಲ
ಮೋಡವೊಂದು ಕರಗಿ ಬಂದ್ರೆ
ಜೀವ ಜೀವದಲ್ಲೂ ತಾನು
ಉಸಿರಿನಂತೆ ಬೆಸೆದುಕೊಂಡ್ರೆ
ಹೆಮ್ಮೆಯಿಂದ ಹೇಳು
ಕರುನಾಡು ನನ್ನದು
ಕನ್ನಡ ಭಾಷೆ ನನ್ನದು!!
ಬಿದ್ದ ಕಡೆಯೇ ಮತ್ತೆ ಎದ್ದು
ನಿಲ್ಲುವಂಥ ಶಕ್ತಿ ತುಂಬಿ
ಆನು, ತಾನು ಅನ್ನದಂತೆ
ಎಲ್ಲರನ್ನೂ ಕೂಡಿ ನಂಬಿ
ಕಲ್ಲು ಬೀಸಿದಲ್ಲೂ ಫಲವ
ಸವಿಯ ನೀಡುವಲ್ಲಿ ನಿಂತು
ಪ್ರೀತಿಯಿಂದ ಹೇಳು
ಕರುನಾಡು ನನ್ನದು
ಕನ್ನಡ ಭಾಷೆ ನನ್ನದು!!
ನೀನು ಮರೆತರೂನು ತಾನು
ನಿನ್ನ ಮರೆಯಲಿಲ್ಲವೆಂದು
ನಿನ್ನ ಸಲಹಿದಾಕೆ ಆಕೆ
ತಾಯಿಯಷ್ಟೇ ತೂಕವೆಂದು
ಭಾವನೆಗಳ ಬಣ್ಣಿಸೋಕೆ
ಸಿಕ್ಕ ಬಣ್ಣವಿದುವೇ ಎಂದು
ಹಾಡುತಲೇ ಹೇಳು
ಕರುನಾಡು ನನ್ನದು
ಕನ್ನಡ ಭಾಷೆ ನನ್ನದು!!
ನೀನು ಇತ್ತದಕ್ಕೂ ಹೆಚ್ಚು
ತಾನು ಇತ್ತದೆಂದು ನೆನೆ
ತನ್ನ ಮಡಿಲ ರಕ್ಷೆಯಲ್ಲಿ
ನೀನು ಸದಾ ತೊನೆವ ತೆನೆ
ಎಲ್ಲಿ ನೀನು ನೀನಾದೆಯೋ
ಅದೇ ಕಾಣು ನಿನ್ನ ಮನೆ
ಘರ್ಜಿಸಿ ನೀ ಹೇಳು
ಕರುನಾಡು ನನ್ನದು
ಕನ್ನಡ ಭಾಷೆ ನನ್ನದು!!
-- ರತ್ನಸುತ
No comments:
Post a Comment