Sunday 17 August 2014

ಹೀಗೊಂದು ಜಾಡ್ಯ

ದೊಂಬಿ ಇದ್ದ ಕಡೆಯಲೆಲ್ಲ
ಒಮ್ಮೆ ಹೀಗೆ ಕಾಣುತೀಯ
ಮತ್ತೆ ಎಲ್ಲೋ ಮರೆಗೆ ಸರಿವ
ದುಂಬಿಯಂಥ ಚಂಚಲೆ;
ನಗೆಯ ಬೀಸಿ ಸೋಸಿ ನನ್ನ
ಹೃದಯವನ್ನು ಮಾತ್ರ ಕದ್ದೆ
ಹೆಸರು ಕೇಳಲೇಕೆ ನಿನ್ನ
ವಿಕಟತನವ ತೋರುವೆ?!!

ಗಂಟೆಗೊಮ್ಮೆ ಬಡಿದುಕೊಂಡು
ಎಚ್ಚರಿಸುವ ಲೋಲಾಕಿಗೆ
ನೀನು ಕಿವಿಯ ಹಿಂಡಿ ಪಾಠ-
ಕಲಿಸಿ ಕೊಟ್ಟ ಹಾಗಿದೆ;
ಕನಸಿನಲ್ಲೂ ಮತ್ತೆ, ಮತ್ತೆ
ಮುಸುಕು ಧರಿಸಿ ಬರುವೆ ನೀನು
ಮನವ ಒಲಿಸಿ ಸರಿಸೋ ಮುನ್ನ
ಹಾಳು ಹಗಲು ಮೂಡಿದೆ!!

ಅಂಬರಕ್ಕೆ ಹೂವ ಮುಡಿಸಿ
ದೃಷ್ಟಿ ಬೊಟ್ಟು ಇಟ್ಟು ಬರುವೆ
ನೀನು, ತಾನು ಒಂದೇ ಎಂಬ
ಭಾವ ನನ್ನ ಮನದಲಿ;
ನಿನ್ನ ಅಂದ, ಚಂದ ವ್ಯಾಪ್ತಿ
ಸುತ್ತಿ ಬರಲು ಹಕ್ಕಿಯಾದೆ
ಹಾಗೇ ಚೂರು ಮೈಯ್ಯ ಮರೆವೆ
ನೀಳ ತೋಳ ಮಡಿಲಲಿ!!

ಸಾಕು ಮಾಡು ಕುಂಟು ನೆಪವ
ಒಂಟಿ ಕಾಲ ನಿಲುವು ನನದು
ನೀನು ಬಂದು ಹೇಳಬೇಕು
ಪ್ರೇಮಬರಿತ ಊಫಿಯ;
ಅಪ್ಪಿ ತಪ್ಪಿ ನಿನ್ನ ಕೆನ್ನೆ
ತೋಯ್ಸಿಬಿಟ್ಟೆ ಚೂರು ನಾನು
ನಕ್ಕು ಸ್ವೀಕರಿಸು ಇನ್ನು
ನಾ ಕೇಳೋ ಮಾಫಿಯ!!

ಎಷ್ಟು ಪ್ಯಾರಾ ಇರುವುದೆಂದು
ಲೆಕ್ಕ ಹಾಕಿ ಕೂರಬೇಡ
ಎಷ್ಟು ಪ್ಯಾರು ಎಂಬುದಷ್ಟೇ
ಅಳತೆಗಣ್ಣು ಹೆಳಲಿ;
ನೀನು ಬೆರೆಳು, ನಾನು ಕೊಕ್ಕಿ
ನೀನು ಸಾಲು, ನಾನು ಚುಕ್ಕಿ
ವಿರಮಿಸುವುದರಲ್ಲೂ ನನ್ನ
ಸದ್ಬಳಕೆಯಾಗಲಿ!!

-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...