Sunday 17 August 2014

ಹಾಡಾಗದ ಹಾಡು

ಉಸಿರು ಸಾಲದ ಹಾಡಿಗೆ ಹೆಸರಿಟ್ಟೆ
"ಸಾವೆಂದು"
ಇನ್ನೂ ಜೀವಂತವಾಯಿತು
ಇನ್ನೂ ಜೀವಂತವಾಗಿದೆ!!

ಹಾಡುವ ಮುನ್ನ ಕಂಠ ಸರಿಪಡಿಸಿ
ಹೀಗೆ ಮೊದಲಾಗಿಸುವ ಮೊದಲೇ
ಶ್ವಾಸಕೋಶಕ್ಕೆ ಬಲೆ ಬೀಸಿದ ಮರುಕ
ಇದ್ದ ಸ್ವರವನ್ನೆಲ್ಲ ದೋಚಿ
ಬಿಕ್ಕಳಿಸುವ ಭಾಗ್ಯ ಒದಗಿಸಿತು;
ಕಣ್ಣೂ ಅದಕೆ ಸಾತು ನೀಡಿತು!!

ಔಪಚಾರಿಕ ಕಣ್ಣೀರೂ ಉಪ್ಪುಪ್ಪು
ಯಾವ ವ್ಯತ್ಯಾಸವೂ ಇಲ್ಲ,
ನಾಲಗೆಗೆ ಹೀಗೆ ಅನಿಸಿದ್ದ್ದು ಸಹ್ಯ;
ಕೆನ್ನೆಗಾದರೂ ತಿಳಿಯಬೇಕಿತ್ತಲ್ಲ,
ಎಷ್ಟು ಮಡುವಿಗೆ ಮಡಿಲಾಗಿಲ್ಲದು?!!

ಮತ್ತೆ ಹಾಡಿಗೆ ಮರಳಿ
ಮರಳಿ, ಮರಳಿ ಸೋತು
ಕರುಳು ಕಂಪಿಸುತ್ತಿದ್ದಂತೆ
ಎದೆಯೊಳಗೆ ಬಿತ್ತಿಕೊಂಡ ಭಾವಗಳು
ರಾಗಬದ್ಧವಾಗಿ ಹಾಡಿ
ಕೊರಳು ನಾಚಿ ತಲೆ ತಗ್ಗಿಸಿತು!!

ಬಹುಶಃ ಅಂದು ನಾ ಹಾಡಿ ಬಿಟ್ಟಿದ್ದರೆ
ಹಾಡಿ ಬಿಟ್ಟೇ ಬಿಡುತ್ತಿದ್ದೆ;
ಹಾಡದೇ ಹಾಡಾದ ಹಾಡು
ಇನ್ನೂ ಕಾಡುವುದ ಬಿಟ್ಟಿಲ್ಲ
ನಾ ಹಾಡುವುದನ್ನೂ!!

-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...