ನೆರಳಿನವಲೋಕನ

ಬಿಸಿಲಿಗೆ ಅಡ್ಡಲಾಗಿ ನಿಂತೆ,
ನೆರಳು ಹಿಂದೆ ಅವಿತುಕೊಂಡಿತು;
ಬೆನ್ನು ಮಾಡಿ ನಿಂತೆ,
ದಿಕ್ಸೂಚಿಯಾಗಿ ಮುನ್ನಡೆಯಿತು;

ಈಗ ಏಳುವ ಪ್ರಶ್ನೆಯೆಂದರೆ
ನೆರಳು ಹೇಡಿಯೋ, ಪರಾಕ್ರಮಿಯೋ?
ಅಥವ
ನಾವು ಅನಿಸಿದಂತೆ ಸ್ವಭಾವ ಬದಲಿಸುವ
ನಮ್ಮದೇ ಪ್ರತಿಬಿಂಬವೋ?
ಉತ್ತರಿಸಲದಕೆ ಬಾಯಿಲ್ಲ,
ಎದ್ದ ಪ್ರಶ್ನೆಯಲ್ಲೂ ತಿರುಳಿಲ್ಲ!!

ಕತ್ತಲಲಿ ಸಂಕುಚಿತಗೊಂಡು
ಬೆಳಕಿನೆಡೆ ಮೈ ಮುರಿದುಕೊಂಡು
ಬಳಿಯಲ್ಲೇ ಇದ್ದೂ ದೂರುಳಿವ ಮಿತ್ರ;
ಕೆಲವೊಮ್ಮೆ ಹುಟ್ಟುವ ಭಯದಲ್ಲಿ
ವಹಿಸುವನು ಪಾತ್ರ,
ಅಂಜಿಕೆಯ ಪಾಲುದಾರನಂತೆ
ತಾನೂ ಕಂಪಿಸಿ, ಚಿಂತಿಸಿ, ಬಾಧಿಸಿ!!

ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಸೆಟೆದುಕೊಂಡು
ಖಳನಂತೆ ಗೋಚರಿಸಿ
ಮತ್ತೊಮ್ಮೆ ಮುದುಡಿ ಕಾಲಡಿಯಲ್ಲೇ ಧ್ಯಾನಿಸುವ;
ಪಲಾಯನಗೊಳ್ಳದೆ ಬೇಲಿಯನ್ನೂ ನೇವರಿಸಿ
ಕೆಸರರಿಗೂ ಮೈಯ್ಯೊಡ್ಡಿ
ನೀರನ್ನೂ ಬಳಸಿ
ಮಸಿಯನ್ನೂ ತಡವಿಕೊಳ್ಳುವ ವೈರಾಗಿ
ಇನ್ನೂ ಅರ್ಥವಾಗದ ಸೋಜಿಗ!!

ನಡುಮನೆಯ ಇರುಳ
ಒಂಟಿ ದೀಪದ ಉರಿಗೆ
ಸುಣ್ಣ ಬಳಿದ ಗೋಡೆ
ಬೆಳ್ಳಿ ಪರದೆಯ ಚಿತ್ರ;

ಒಣಗಿ ಹಾಕಿದ ಬಟ್ಟೆ
ಹಬ್ಬಿ ಬೆಳೆದ ತುಳಸಿ
ಗೂಟದ ಮೊರ, ಮಂಕರಿ
ಜೋತ ಕೊಡೆ, ನೇಗಿಲು
ಆಕಳ ಕೊಂಬು, ಬಾಗಿಲ ತೋರಣ
ಜೋಳದ ಜುಟ್ಟು, ಅಮ್ಮಳ ಸೀರೆ
ಅಪ್ಪನ ಕುರ್ಚಿ, ಪುಸ್ತಕ ಚೀಲ
ಎಲ್ಲವೂ ಮೂಖಿ ಪಾತ್ರಗಳೇ!!

ನೆರಳ ನೆನಪಲ್ಲಿ
ಇರುಳ ಕಳೆದವ ನಾನು
ಹಗಲ ಬೆಳಕಲ್ಲಿ
ನೆರಳ ಕಡೆಗಣಿಸಿ!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩