Sunday 17 August 2014

ಹೀಗೊಂದು ಪ್ರಕಟಣೆ

ನಾನೊಂದು ಪ್ರೇಮ ಯಂತ್ರವ ನಿರ್ಮಿಸಿದೆ
ಯಾವ ಹಿನ್ನಲೆಯೂ ಇಲ್ಲದ ಜ್ಞಾನ
ನನ್ನ ಪ್ರೇರೇಪಿಸಿದ್ದು ಸೋಜಿಗದ ವಿಷಯ;

ನಿದ್ದೆಗೆಟ್ಟು, ಊಟ ಬಿಟ್ಟು
ಕೊನೆಗೊಂದು ರೂಪ ಕೊಟ್ಟೆ,
ಕ್ಷಣಕ್ಕನುಗುಣವಾಗಿ ಇಷ್ಟವಾಗೋ ರೂಪ;

ಸ್ವಯಂಚಾಲಿತ ಯಂತ್ರಕ್ಕೆ
ಬುದ್ಧಿ, ಶಕ್ತಿ, ಸೂಕ್ಷ್ಮಗಳ ಪರಿವಿತ್ತು,
ಎಲ್ಲವನ್ನೂ/ಎಲ್ಲರನ್ನೂ ಆಧರಿಸಿತ್ತ,
ನನ್ನ ನೋವಿಗೆ ಜೊತೆಯಾಗಿ ಕಣ್ಣೀರೊರೆಸಿ
ನನ್ನನ್ನೇ ಸೋಲಿಸಿತ್ತು!!

ಪ್ರೇಮದ ಅರ್ಥವ ಎಂದೂ ನಾ ತಿಳಿಸಿದ್ದಿಲ್ಲ,
ವ್ಯಾಪ್ತಿಯನ್ನೂ ಸೂಚಿಸಿರಲಿಲ್ಲ,
ಹೆಸರಿಟ್ಟದ್ದಷ್ಟೇ, ಪ್ರೇಮಮಯವಾಯಿತು;
ಅಜ್ಜಿ ಕುಟಾಣಿ ಕುಟ್ಟುತ್ತಾ ಹೇಳಿದ ನೆನಪು
"ಚಿತ್ತದಂತೆ ಚಿತ್ತಾರ, ಮನಸಿನಂತೆ ವ್ಯವಹಾರ"
ಎಲ್ಲವೂ ಅಂತಃಕರಣದ ಗ್ರಹಿಕೆ;

ದಿನೇ, ದಿನೇ ಪ್ರೇಮ ಹೆಚ್ಚುತ್ತಲೇ ಇತ್ತು;
ನನ್ನ ಸ್ವಾರ್ಥಕ್ಕೆ ಬೊಬ್ಬೆ ಬರೆ ಎಳೆದು
ನೊಂದ ಕಣ್ಣುಗಳ ನಿಭಾಯಿಸಲು
ಊರೂರು ಅಲೆದು ಬೀದಿ ದಾಸನಾಯಿತು;

ಪತ್ತೆ ಮಾಡಿದೆ,
ಒಲ್ಲದ ಪುಣ್ಯಾತ್ಮವ ಜಗ್ಗಾಡುತ್ತ
ಪ್ರೇಮ ಪಸರಿಸಿದ ದಿಕ್ಕು ದಿಕ್ಕಿಗೂ ಕಾಣುವಂತೆ/
ಕೇಳುವಂತೆ ಗೋಳಾಡಿಸಿ
ಮನೆಯಲ್ಲಿ ಕೂಡಿ ಹಾಕಿದೆ;

ಆಗಲೂ ನಾ ವಿರೂಪಗೊಳಿಸಲಿಲ್ಲ;
ನಡೆದದ್ದೆಲ್ಲವೂ ಮನಸಿನೊಳಗೇ
ಖಡ್ಗ ಮಸೆವ ಸಂಚು;

ಹೇಳಿದ್ದೆನಲ್ಲ, ಅದು ಬಲು ಚೂಟಿ;
ಬೋಧಿಸದ ವ್ಯಾಘ್ರತನವ ಚಿಟಿಕೆಯಲ್ಲೇ ಕಲಿತು
ಮೊದಲು ನನ್ನ ನೆತ್ತರ ಹೀರಿತು;
ನಂತರ ಈ ಕೇರಿ, ಆ ಊರು
ಮನಸು ಮನಸುಗಳ ನಡುವೆ ಹರಿದು
ಎಲ್ಲೆಲ್ಲೂ ಕೆಂಪು ಕ್ರಾಂತಿಯಾಗಿಸಿತು!!

ಈ ಸದ್ಯ ಇಸ್ರೇಲ್ ದೇಶದಲಿ ನೆಲೆಸಿದ್ದು
ಮುಂದೆ ಇನ್ನೂ ಹೆಚ್ಚು ಪ್ರವಾಸ-
ಕೈಗೊಳ್ಳಲಿದೆ ಎಂಬ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ!!

-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...