ಶಪಿತ ಹನಿ

ತಾವರೆ ಎಲೆಯ ಹನಿಗಳ ಸೊಬಗು
ಲೋಕಕೆ ಅನಿಸಿತು ಮುತ್ತಿನ ತಡಿಕೆ;
ಒಲ್ಲದ ಮನಸಿನ ಎಲೆಯ ಮಡಿಲಲಿ
ಹನಿಗಳ ಹಿಂಸೆಯ ಸ್ವಗತದ ಕುಡಿಕೆ!!

ಬೆಳಕಿಗೆ ಎಲ್ಲವ ಕೆದಕುವ ಚಾಳಿ
ಕುಂಟಿತ ಹನಿಯನೂ ಕೆರಳಿಸಿಕೊಂಡು;
ಕವಿಗೋ ಮಾಡಲು ಕೆಲಸವೇ ಇಲ್ಲ
ಕೂತನು ಗೀಚುತ ಊಹಿಸಿಕೊಂಡು!!

ಎಲೆ ತಳದಲಿ ಎಷ್ಟೋಂದು ನೀರು
ಆಳ, ವಿಸ್ತಾರದ ಅನುಭವವಿದೆ;
ಹನಿಗೋ ಬೀಳ್ಗೊಡುಗೆಯ ಋಣವಿಲ್ಲ
ಕಪ್ಪೆಯ ಕಣ್ಣೀರಿಗೂ ಕಡೆಯಾಗಿದೆ!!

ತಾವರೆ ಪಕಳೆಯಲೂ ಇದೇ ಸುದ್ದಿ
ಚಂದ್ರನ ಜೊನ್ನಾದರೂ ಅಲ್ಲಿ ರದ್ದಿ;
ದಾಹಕೆ ಧಾವಿಸದ ಶಪಿತ ಜಲ 
ಹರಿವಿಗೆ ಸಲ್ಲದೆ ಪೂರ್ಣತೆಯಿಲ್ಲ!!

ಪಾಡುವ ಭಾವಕೆ ಹಿಂಗುವುದಲ್ಲದೆ
ಪಾಪವ ಎಸಗದ ಈ ಪರಿ ಪಾಪಿ;
ಹೊಳೆವ ಹಲವು ಬಗೆಯೊಳಗೊಂಡೂ
ಪ್ರಕೃತಿಯ ಸಹಿಸದ ಮುಂಗೋಪಿ!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩