Sunday 17 August 2014

ಸಿಹಿ ಸುಳ್ಳಿನ ಸರಪಳಿ

ಇರುವೆ ಗೂಡಿನ ಮೇಲೆ ನಿಂತು
ಕಾಯುವ ಕಸುಬಿಗೆ
ಮೈಯ್ಯೆಲ್ಲ ಬೊಬ್ಬೆಯ ಗುರುತು;
ಇಷ್ಟಾದರೂ ಧ್ಯಾನ ನಿನ್ನದೇ ಕುರಿತು!!

ಹುಳ ಬಿದ್ದ ಹಾಳು ಮರದ ಕೆಳಗೆ
ಸತ್ತ ಎಲೆಗಳ ಸ್ಥಿತಿಯೋ, ತಿಥಿಯೋ!!
ಒಂದಕ್ಕೊಂದು ಗುದ್ದಾಡಿದ ಸುಖಕ್ಕೇ
ಕಾಡ್ಗಿಚ್ಚು ಹುಟ್ಟಿಕೊಂಡದ್ದು;
ಆದರೂ ಕಿಂಚಿಷ್ಟೂ ಕದಲಲಿಲ್ಲ ನಾನು!!

ಬಂದೇ ಬರುತ್ತೇನೆಂದು ನೀ ಹೋದಾಗಿನಿಂದ
ಹೂ ಕಾದು ಅರಳದಂತೆಯೇ ಬಾಡಿತು;
ಹೀಗಿದ್ದೂ ಸಾಯದೆ ಇನ್ನೂ ಬಳ್ಳಿಯ ಬಳಸಿ
ಜೀವಂತವಾಗಿವೆ ನಿನ್ನ ಆಗಮನಾಭಿಲಾಶಿಗಳಾಗಿ!!

ಹೆಜ್ಜೆ ಗುರುತುಗಳನ್ನಾದರೂ ಜೋಪಾನವಾಗಿರಿಸಲು
ಅಲ್ಲಲ್ಲಿ ಎದೆಯೆತ್ತರ ಹುತ್ತಗಳು ಎದ್ದಿವೆ;
ಸರ್ಪಗಾವಲಿನಲ್ಲಿ ಪುಷ್ಪಾರ್ಚನೆ ನಡೆಸಿ
ಧನ್ಯವಾದ ಪವನಕ್ಕೂ ನಿನ್ನದೇ ಕೊರತೆ!!

ಕೊಸರುತ್ತ ಕಸ್ತೂರಿ ಪಸರಿಸಿದ ಕೃಷ್ಣ ಮೃಗ
ಎದುರು ನೋಡಿದ ದಾರಿ ಯಾವುದೆನ್ನದಿರು;
ಜಡ ಕಲ್ಲಿಗೂ ತಿಳಿದ ಸರಳ ಸಂಗತಿ ಅದು
ನೀ ಮೆಟ್ಟಿ ಬಿಟ್ಟು ಹೋದ ಕಾಲು ದಾರಿ!!

ಉರಿ ತಾಳಿತೀ ಒಡಲು
ತಡವಲು ನೀ ತರಲಿರುವ ನವಿಲು ಗರಿ ನೆನಪಲ್ಲಿ;
ಕಣ್ಣೀರನಾವ ಕಾರಣಕ್ಕೂ ಪೋಲಾಗಿಸದೆ
ಆನಂದ ಬಾಷ್ಪಕ್ಕೆ ಮುಡಿಪಿಟ್ಟೆನಾ ಹಾಗಾಗಿ
ಸುಕ್ಕುಗಟ್ಟಿದ ಕೆನ್ನೆ ನಿನಗೆ ಸಿಗದು;
ಉಸಿರುಗಟ್ಟಲು ಜೀವ ಹೆದರದಿಹುದು!!

-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...