ಕಂಡದ್ದು-ಕಾಣದ್ದು

ಕತ್ತಲು ಹಡೆದ ಬೆಳಕು
ಕತ್ತಲನ್ನೇ ನುಂಗಿತು;
ಕೊನೆಗೆ ಬೆಳಕು ಸತ್ತಾಗ 
ಕತ್ತಲೇ ಬೇಕಾಯಿತು!!

ಒಂದು ಕಿಚ್ಚಿನಂತರದ ಈರ್ವರಲ್ಲಿ
ಒಂದನ್ನೊಂದು ಮರೆಸುವ ಸಾಹಸ;
ಕತ್ತಲು ಸರ್ವಕಾಲಿಕ ಸತ್ಯ
ಬೆಳಕು ಸಿಂಗಾರಮಯ ಸುಳ್ಳು!!

ವಿಕೃತಿ, ಪ್ರಕೃತಿಗಳೆಲ್ಲವೂ
ಒಪ್ಪುವಂಥ ಕೃತಿಗಳೇ
ತಾಮಸ ತವರೂರ ಕೋಣೆಯಲಿ;
ಅದು-ಇದು, ಹಾಗೆ-ಹೀಗೆ
ಯಾವುದಾವುದೋ ಅವಾಂತರಗಳು
ಬೆಳಕ ಬೆಂಬಲಿಸಿದವುಗಳಲಿ!!

ಕತ್ತಲ ಕಣ್ಣಿಗೆ ವಿವಸ್ತ್ರವೂ ವಸ್ತ್ರ,
ಖಾಲಿತನವೂ ಅಪ್ರತಿಮ ಕಲೆ,
ಪೋಲಿತನ ಪಕ್ವಗಣ್ಣಿನ ನೋಟ;
ಬೆಳಕು ಎಲ್ಲೆಲ್ಲೂ ಮೂಗು ಇಣುಕಿಸಿ
ಅಣುಕಿಸುವ ವ್ಯಂಗ್ಯಕಾರ,
ಬಣ್ಣವನ್ನೂ ನಿಗ್ರಹಿಸುವ ಸರ್ವಾಧಿಕಾರ!!

ಮನಸಿಗೆ ಉರಿವ ದೀಪಕ್ಕಿಂತ
ಅಡಿಯ ನಿಮ್ಮಳ ಕತ್ತಲ ಮೋಹ;
ಬೆಳಕ ಪ್ರಶ್ನೆಗಳಿಗೆ ನಿರುತ್ತರವಾದರೆ
ಕತ್ತಲ ಉತ್ತರಗಳಿಗೆ ಇನ್ನೂ ಪ್ರಶ್ನೆಗಳೇ ಹುಟ್ಟಿಲ!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩