ನನ್ನ ಗೋರಿ ಕಲ್ಲು

ಕಣ್ಣಿಗೆ ಕಾಡಿಗೆ ಹಚ್ಚದ ಹೊರತು
ನನ್ನ ಗೋರಿಗೆ ಧೂಪ ಹಚ್ಚಲು ಬರಬೇಡ;
ಕಣ್ಣೀರ ಹೇಗೋ ಮರೆಸುವ ಮಾಯಾಂಗಿಣಿ ನೀ
ಮತ್ತೆ ನನ್ನ ಕಣ್ತಪ್ಪಿಸಿ ಅಳುವುದು ಬೇಡ!!

ಹಸ್ತಕ್ಕೆ ಗೋರಂಟಿ ಮೆತ್ತದ ಹೊರತು
ಎದೆಯ ಹೂವ ಸೋಕಲು ಮುಂದಾಗಲೇ ಬೇಡ;
ಆಣೆಗಳ ಗುರುತುಗಳ ಇನ್ನೂ ಅಳಿಸದಾಕೆ ನೀ
ಅಂಗೈಯ್ಯಲಿ ಮೊಗವಿರಿಸಿ ಬಿಕ್ಕಳಿಸಬೇಡ!!

ಮುಂಗುರುಳ ಹಿಂದೆ ಸರಿಸಿ
ಬಂಧಿಸಿಟ್ಟು ಬಾ ಬಳಿಗೆ
ಗಮನ ಸೆಳೆವ ಗಾಳಿಗಾವ ನೆಪವ ಕೊಡದಿರು,
ಸ್ತಬ್ಧ ಬೆರೆಳಿಗಾವ ಹೊಣೆಯ ಭಾರ ಹೊರದಿರು!!

ಎಲ್ಲ ಬಂಧವ ದಾಟಿ
ನಿರ್ಬಂಧಗಳಿಲ್ಲದಂತೆ
ಮುಕ್ತಳಾಗಿ ಬಾ ನನ್ನ ಮೌನ ಆಲಿಸೋಕೆ;
ಕೊನೆ ಕ್ಷಣಗಳ ತಡವರಿಕೆಯ ಲೋಪ ನೀಗಿಸೋಕೆ!!

ದೂರದೋರೆಗಣ್ಣ ಬೀರಿ
ಸನ್ನೆಯಲ್ಲಿ ಮಾತನಾಡಲಷ್ಟೇ ಸಾಲದು;
ಚೂರು ಸಮಯ ಮಾಡಿಕೋ
ಹತ್ತಿರಕ್ಕೆ ನಿಂತು, ಕರಗೋ ಕಪ್ಪ ಜೊತೆಗೆ ನೆಂಜಿಕೋ!!

ಮುಳ್ಳ ಸೋಕಿಸುತ್ತ ಅಲ್ಲಿ ಹೂವ ಚಿಗುರಿಸು
ಹೂವಿನಾವರಣದಲ್ಲಿ ಬನವಾಸಿಯಾಗುವೆ;
ಮಣ್ಣು ಮುಚ್ಚಿದೆದೆಯ ಮೇಲೆ ನೆರೆಳ ಕಂಪಿಸು
ನಿನ್ನ ಉಸಿರ ಸೋಂಕಿನಿಂದ ನಾನು ಮತ್ತೆ ಹುಟ್ಟುವೆ!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩