ಇತ್ತ ಬರ, ಅತ್ತ ನೆರೆ

ಸಂಜೆ ಮಲ್ಲಿಗೆಗಿಲ್ಲ ಒಲವ ಸ್ಪರ್ಶ
ಮನೆ ಮಗಳು ಇನ್ನೆಲ್ಲೋ ಕನಕಾಂಬರವ ಕಟ್ಟಿ
ಮುಡೆಗೇರಿಸಿ ನೆನೆದು ಬಿಕ್ಕುತಿಹಳು,
ಮೋಡ ಕವಿಯದೆ ಮಳೆಗರೆಯುತಿಹಳು;

ತವರೂರ ದಾರಿ ನೆರೆ ಬಂದು ಮುಚ್ಚಿದೆ
ಈಗಷ್ಟೇ ಕೇಳಿಸಿದಳು ವಾರ್ತಾ ವಾಚಕಿ
ಫೋನು ಹಚ್ಚಲು ಇಲ್ಲ ಸಂಪರ್ಕ ಸವಲತ್ತು
ಟವರ್ ಉರುಳಿ ತವರ ದೂರ ಮಾಡಿಹುದು

ಒಲೆಯ ಮೇಲೆ ಬೆಂದ ಅಗಳು
ಉದರದಲ್ಲಿ ಸಂಕಟ ಅನುಭವಿಸುತ್ತಿದೆ;
ಬೀದಿ ನಾಯಿಗಳು ಮಿಕ್ಕ ಅನ್ನವ ತಿನ್ನಲೊಲ್ಲವು
ಸೊಕ್ಕಿದವುಕ್ಕೆ ತಂಗಲ ರುಚಿ ಹತ್ತಿಬಿಟ್ಟಿದೆ!!

ಮನೆ ಯಜಮಾನನಿಗೆ ಜೋಡು ಕಚ್ಚಿದ ಕೋಪ,
ಉಪ್ಪು ಸಾಲದ ಸಪ್ಪೆ ಸಾರು ಬಡಿಸಲು
ಪಾಪ, ಎಂಜಲ ಏಟಿಗೆ ಕೆನ್ನೆ ಹಸಿವನು ಮರೆತು
ನಾಲಗೆ ಒಳಗೊಳಗೆ ಅಮ್ಮನ ಜಪಿಸಿತು!!

ಸಂಜೆ ವೇಳೆಗೆ ಚೂರು ಉಪ್ಪು ಶಾಖದ ಜೊತೆಗೆ
ಊತ ಕಂಡ ಕೆನ್ನೆಗಿತ್ತ ಚುಂಬನದ ಬಿಸಿ;
ಚಾದರವ ಹೊಸಕಿದ ಸುಕ್ಕು ಬೆರಳುಗಳಲ್ಲಿ
ದಿನವಿಡೀ ಅಳಿಸಿದ ಕಣ್ಣೀರಿನ ಮಸಿ!!

ಇತ್ತ ಬರ, ಅತ್ತ ನೆರೆ
ಅಳುವುದೇತಕೋ ಆಕೆ?!!
"ಬಿಳಿ ಮೊಗ್ಗು ಕೆಂಪಾದವೇ ಹೊರತು
ಮಿಕ್ಕೇನೂ ಬದಲಾಗಲಿಲ್ಲವ್ವ;
ಅಪ್ಪಯ್ಯನಂಥ ಮಾವ,
ನಿನ್ನನ್ನೂ ಮೀರಿಸೋ ಅತ್ತೆ,
ಇಷ್ಟಾರ್ಥ ಅರಿವ ಸ್ನೇಹಮಯ ಗಂಡ,
ಜೊತೆಗಿಷ್ಟು ಹಿಡಿ ಕಣ್ಣೀರು"
ಬಾರದ ಉಸಿರಲ್ಲಿ
ಅಮ್ಮ ಒಡ್ಡುವ ಪ್ರಶ್ನೆಗಳಿಗೆ
ಮುಂಗಡ ತಯಾರಿ!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩