ಕಣ್ಣು ಮತ್ತು ಕನ್ನಡಕ

ನನ್ನ ನೋಟ ಅಸ್ಪಷ್ಟವೆನಿಸಿದಾಗೆಲ್ಲ
ಕನ್ನಡಕ ತೆಗೆದು ಬಿಸಿ ಉಸಿರನೂದಿ
ಅಂಗಿ ಕೊನೆಯಲ್ಲಿ ತುಸು ಮೆಲ್ಲಗೆ ಒರೆಸಿ
ಮೂಗಿನ ಮೇಲೇರಿಸುವ ಮುನ್ನ
ಕಿವಿ ಮರೆಯ ಒಪ್ಪಗೂದಲು ಉಸಿರಾಡುವಂತೆ
ಕಣ್ಣಂಚಿನ ತೊಗಲು, ಮೈ ಮುರಿದಂತೆ
ಅಪರೂಪದ ಮಿತ ಸಂಭ್ರಮಾಚರಿಸುವಾಗ
ತೆರೆ ಎಳೆವ ಸೂತ್ರಧಾರಿ ನಾನೇ ಆಗುತ್ತೇನೆ!!

ಸಮಸ್ಯೆ ಕನ್ನಡಕದ್ದಲ್ಲ, ಕಣ್ಣಿನದ್ದೇ ಎಂದು
ನಂಬಿಸುವ ಪ್ರಯತ್ನವಾದರೂ ವ್ಯರ್ಥ;
ಕಣ್ಣು ಸರ್ವಾಧಿಕಾರತ್ವದ ಪ್ರತೀಕ
ಭಾವುಕತೆಯ ಪ್ರತಿಬಿಂಬ
ಹಠದ ಸಾರಥಿ, ಚಟದ ಗಾಲಿ;
ಹೀಗಿರುವಾಗ ಬೆಟ್ಟು ಮಾಡಿದರೂ
ಚುಚ್ಚಿದಷ್ಟೇ ನಿಷ್ಟೂರ ಇಂದ್ರಿಯ!!

ಗಾಜಿನ ಚೌಕಟ್ಟಿನ ಹೊರಗೆ 
ಸೀಮೆ-ಸೀಮೆಯಾಚೆಯ ಸೀಮೆಗಳು;
ಆದರೂ ಒಂದೇ ಜಗತ್ತು,
ಒಪ್ಪುವುದೆಷ್ಟು ಸರಿ, ಜರಿವುದೆಷ್ಟು ತಪ್ಪು?
ಗಾಳಿ, ಮಳೆ, ಬಿಸಿಲ ದಾಳಿಗೆ
ದೈತ್ಯ ಗೋಡೆಗಳು ಬಿರುಕು ಬಿಟ್ಟವು,
ಮನಸು-ಮನಸುಗಳ ನಡುವೆ
ಬಿರಿಯುವ ಸೂಚನೆಗಳೇ ಇಲ್ಲ!!

ಕಣ್ಣು ನೋಟದಷ್ಟೇ ಪೂರ್ಣ
ಕಾಣದ ದಾರಿಗಳ ಪಾಲಿಗೆ ಹುಟ್ಟು ಕುರುಡು
ಕ್ಷಿತಿಜವನ್ನೂ ಬಣ್ಣಿಸಬಲ್ಲ ಬಂಡ ಕವಿ
ಆಸೆ ಪಟ್ಟವುಗಳ ಪಾಲಿಗೆ ಕೋವಿ ಕುದುರೆ;
ಹಗಲ ಬೆಳಕಿಗವಲಂಬಿತ
ಇರುಳ ನಿರಾವಲಂಬಿತ ಕನಸಿನೊಡೆಯ
ಬಾಣ ಗುರಿಯ ರಾಯಭಾರಿ
ಕುಲ-ಸಂಕುಲಗಳ ಅಡಿ ಬರಹ!!

ನಾನು ನಾನೇ ಎಂದು ದಿಟ ಪಡಿಸುವ
ಕನ್ನಡಿಯೊಳಗಣ ಬಿಂಬಕ್ಕೂ
ಕನ್ನಡಕ ಮುಖೇನ ನೋಡುವಾಗಲಷ್ಟೇ
ನಾನು ಸ್ಪಷ್ಟ "ನಾನು"
ಇಲ್ಲವಾದರೆ ನಾನೂ, ಅವನೂ ಕುರುಡರೇ!!

ಮನಸಿನ ಕಣ್ಣಿಗೂ ತೊಡಿಸುವುದಾಗಿದ್ದರೆ
ಎಂದೋ ತೊಡಿಸಬಹುದಾಗಿತ್ತು;
ಯಾಕೋ ಮನಸು 
ಮಂಜು ಮುಸುಕಿನ ಹಾದಿಯಲ್ಲೇ ಚಲಿಸಿದಂತಿದೆ!!

                                                    -- ರತ್ನಸುತ

Comments

  1. ಕನ್ನಡಕವನು ಹಳಿಯುತ್ತ ಕೋರವುದು ಸರ್ವೇ ಸಾಮಾನ್ಯ. ಒಳ ಕಣ್ಣಿನ ಐಬು ತನ್ಮೂಲಕ ಹೊರ ಕಣ್ಣಿನ ಮುಸುಕು ಮರೆಮಾಚುತ್ತೇವೆ!

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩