Tuesday 15 July 2014

ಮರುಭೂಮಿ ಪಯಣ

ಮರಳು ಯಾಮಾರಿಸುತ್ತಿದೆ
ಬಿಟ್ಟ ಹೆಜ್ಜೆಗಳ ನುಂಗಿ;
ಈಗಿದ್ದ ದಾರಿಯ ಇಲ್ಲವಾಗಿಸಿ
ಮತ್ತೊಂದರ ಸೃಷ್ಟಿಸುತ್ತಿದೆ
ಹಿಂಬಾಲಕರಿಗಾವ ಸುಳುವನ್ನೂ
ಬಿಟ್ಟುಗೊಡದಂತೆ!!

ನಾ ಮಲಗಿದ ಜಾಗದಲ್ಲೇ
ಜೀವ ಸಮಾಧಿ ನಿರ್ಮಿಸಿದ
ಅಮಾನುಷ ಮರಳ ಗುಡ್ಡೆಗೆ
ಗಾಳಿಯ ವಿಪರೀತ ಬೆಂಬಲ;
ದಿಬ್ಬದ ಮೆಲೆ ನೆಟ್ಟ 
ವಿಜಯ ಪತಾಕೆ
ನೆಲಕ್ಕುರುಳಿ ಮಣ್ಣು ಮುಕ್ಕುತ್ತಿದೆ!!

ನೆತ್ತಿ ಸುಡುವ ಸೂರ್ಯನಿಗೆ
ಬೆಂಗಾವಲಾದ ನೀಲಿ ಆಕಾಶ
ಇದ್ದೆಲ್ಲ ಮೋಡಗಳನ್ನೂ ಹಿಂಡಿ
ದಣಿದವನಿಗೆ ಒದಗಿಸುತ್ತಿತ್ತು;
ಇತ್ತ ನನ್ನ ಹೊತ್ತ ಭೂಮಿಗೆ
ತೊಟ್ಟನ್ನೂ ಒಪ್ಪಿಸದಂತೆ!!

ಕಳ್ಳಿ ಗಿಡಗಳ ಮಾಂಸ
ಅದೆಷ್ಟು ಚೈತನ್ಯದಾಯಕ?!!
ಮಸಣದ ಪಾಲಾದರೂ
ಜೀವಂತಿಕೆ ಕಾಪಾಡಿಕೊಂಡ ಅವು
ನಿಸ್ವಾರ್ಥ ಜೀವಿಗಳು;
ಆತ್ಮ ರಕ್ಷಣೆಗೆ ಬೆಳೆಸಿಕೊಂಡ
ಮುಳ್ಳುಗಳ ಹೊರತು ಪಡಿಸಿ!!

ಹಣೆಗೆ ಅಂಗೈಯ್ಯನಿಟ್ಟು
ದೂರ-ದೂರ ನೋಡಿದಷ್ಟೂ
ಕಂಡುಕೊಂಡ ದಾರಿಗಳನೇಕ;
ಊರುಗೋಲಿಗೆ ಗೆಜ್ಜೆ ಕಟ್ಟಿ
ಹೆಜ್ಜೆಜ್ಜೆಗೂ ಎಚ್ಚರಗೊಳ್ಳೂತ್ತೇನೆ
ನಿರಾವಲಂಬಿತನಾಗಿ!!

ಕಣ್ಣಿನ ಪೊರೆಯಾಚೆ ಕಂಡ
ವಿಶಾಲ ಪ್ರಪಂಚಕ್ಕೆ 
ನನ್ನ ತತ್ವ ನುಡಿ
ಮಸಿ ಬಳಿದ ಹಾಳೆ;
ಎಂದಾದರೊಮ್ಮೆ ಕಸುವಾಗುವಂತೆ
ಇಲ್ಲ ಕಸವಾಗುವಂತೆ!!

                              -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...