ಗುಮ್ಮ ಬಂತು ಗುಮ್ಮ

ಕೂಸು ಕತ್ತಲ ಕೋಣೆಯತ್ತ
ಪುಟ್ಟ ಹೆಜ್ಜೆಯಿಟ್ಟು ಸಾಗುವಾಗ
ಸಂಬಾಳಿಸಲಾಗದ ಅಮ್ಮ
"ಅಲ್ಲಿ ಗುಮ್ಮ ಇದಾನೆ ಕಂದ" ಅಂದೊಡನೆ
ಅಲ್ಲೊಬ್ಬ ಗುಮ್ಮ ನಿಜಕ್ಕೂ ಹುಟ್ಟಿಕೊಳ್ಳುತ್ತಾನೆ!!

ಸೆರಗ ಹಿಂದೆಯೇ ಅವಿತು
ದೀಪ ಉರಿಯದ ಹೊರತು
ಅತ್ತ ಸುಳಿಯಲು ಪುಕ್ಕಲುತನ
ಅಡ್ಡಗಟ್ಟಿದಾಗ
ಕೂಸೊಳಗಿನ ಪರಾಕ್ರಮಿಯೊಬ್ಬನ
ಅಹಮಿಕೆಗೆ ಕೊಡಲಿ ಏಟು;
ಎಲ್ಲವೂ ಸಹ್ಯ ಅದಕೆ 
ಗುಮ್ಮ ಒಬ್ಬನ ಬಿಟ್ಟು!!

ಗೂಟಕ್ಕೆ ನೆತು ಹಾಕಿದ ಅಪ್ಪನ ಕೋಟು
ಮಸಿಯಾದ ಹಳೆ ದೇವರ ಫೋಟೊ
ಟೇಬಲ್ ಫ್ಯಾನು, ನಿಲುವುಗನ್ನಡಿ
ಮಂಚದ ಕಾಲು, ಕಿಟಕಿಯ ಕೋಲು
ಬೆಳಕಿನ ಕಿರಣ, ಸೋಫಾ ನೆರಳು
ಎಲ್ಲದರಲ್ಲೂ ಗುಮ್ಮ ಅಡಗಿದ್ದಾನೆ;

ನಿದ್ದೆಯಿಂದೆಚ್ಚರಗೊಂಡು
ಪಿಳಿ-ಪಿಳಿ ಕಣ್ಣರಳಿಸಿ
ಅಮ್ಮನ ಹಿಡಿಯ ಅರಸಿದ ಕಂದನ
ಆಡಿಸುವವನೂ, ಹೆದರಿಸುವವನೂ
ತಾನೇ ಭಾವಿಸಿ, ರೂಪಿಸಿ, ಹೆಸರಿಸಿದ
ನಿರಾಕಾರ ಗುಮ್ಮ!!

ಬೆಂಬಲಕಾದವರು ಜೊತೆಗಿದ್ದರೆ
ಹೇಗಾದರೂ ಮಾಡಿ ಕಿವಿ ಹಿಂಡುವ ಆಸೆ,
ಪೆಟ್ಟು ಕೊಡಲು ಪಟ್ಟು,
ಕಂಡ-ಕಂಡಲ್ಲಿ, ಸಿಕ್ಕ-ಸಿಕ್ಕಲ್ಲಿ
ಅಡ್ಡಾಡಿಸಿ ಸೇಡು ತೀರಿಸುವ ಅತಿಶಯ;
ಇಷ್ಟಾದರೂ ಗುಮ್ಮ ಸುತ್ತಲೇ ಸುತ್ತುವ 
ಬಿಟ್ಟು ತೊಲಗದ ಮೊಂಡು ಪ್ರಾಣಿ!!

ಹಂತ ಹಂತಕ್ಕೂ 
ಹೆದರಿಸುವ ದಿಕ್ಕು-ದೆಸೆ ಬದಲಾಯಿಸುವ ಅವನಿಗೆ
ಒಬ್ಬ ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್
ಬ್ಯಾಟ್ ಮ್ಯಾನ್, ಹನುಮಾನರ ಸವಾಲು,
ಚೋಟ ಭಿಮ್ ಶಕ್ತಿ,
ಹಾರ್ಲಿಕ್ಸ್, ಕಾಂಪ್ಲಾನ್, ಬೋರ್ನ್ವೀಟ 
ಬಿಸ್ಕತ್ತು, ಚಾಕ್ಲೇಟಿನ ಚುರುಕು
ಆದರೂ ಅವ ಸೋಲುವುದಿಲ್ಲ
ಇವ ಸೋಲೊಪ್ಪುವುದಿಲ್ಲ!!

                                -- ರತ್ನಸುತ

Comments

  1. ಕೂಸೊಳಗಿನ ಪರಾಕ್ರಮಿಯನ್ನು ಗುರುತಿಸಿದ ನಿಮ್ಮ ಕವಿ ಮನಸಿಗೆ ಶರಣು.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩