ಅಜ್ಜಿಯ ಆಷಾಢ

ಆಷಾಢ ಗಾಳಿಯ ನಡಿವೆ
ಸುಮಾರು ಇಪ್ಪತ್ತೆಂಟು ವರ್ಷಗಳ ಹಿಂದೆ
ಇಹಲೋಕ ತ್ಯಜಿಸಿದ ಗಂಡನ ನೆನಪಲ್ಲಿ
ನೂರರ ಸಮೀಪದ ಹಣ್ಣು ಮುದುಕಿ
ಒಂದು ಕೈಯ್ಯಲ್ಲಿ ಹಣೆಗಾಗುವಷ್ಟು 
ಪುಟ್ಟ ಕೈಗನ್ನಡಿ,
ಮತ್ತೊಂದು ಕೈ ಬೆರಳಂಚಿನ ವಿಭೂತಿ ಹಿಡಿದು
ಹಣೆಗೆ ಮುತ್ತುವ ಮುನ್ನ
ಪಂಚಭೂತಗಳಲ್ಲಿ ಪಲಾಯನಗೊಂಡಿತು!!

ಬಾಗಿದ ಬೆನ್ನೊರಗಿದ ಗೋಡೆ
ಹೇಳದ ವ್ಯಥೆಗಳಿಗೆ ಹಸಿಯಾಗಿ,
ಊರ್ಗೋಲ ಹಿಡಿ ಸವೆಯುವಿಕೆಗೆ
ಸಾಂತ್ವನ ಉಣಿಸುವ ವೇಳೆ
ನೆಲದ ಮೇಲೆ ಚೆಲ್ಲಾಡಿಕೊಂಡ ಬರಣಿ ಧೂಳು,
ಚೀಲದ ಚೂರಡಿಕೆ, ಕಡ್ಡಿ ಪುಡಿಗೆ 
ಒಂದು ನೀಳ ಮೌನ ಶಾಂತಿ ಕೋರಿದಂತೆ
ಮತ್ತಲ್ಲೇ ಪಲಾಯನ!!

ಚೆದುರಿದ ಬಿಳಿಗೂದಲ ಗಂಟಿಗೆ
ಸವೆದ ಮೊಣಕೈಯ್ಯ ಪ್ರತೀಕಾರ,
ಹೆಗಲ ಮೇಲೆ ನಿಲ್ಲದೆ ಜಾರುವ ಕುಪ್ಪಸ,
ವಿನಾಕಾರಣ ಕಂಬನಿಗೆ ಹಸ್ತದ ನಿರಾಧಾರ;

ಸುಕ್ಕು ಮುಖದಲ್ಲಿ ನಗುವಿನ ಹುಡುಕಾಟ;
ಅದು ತುಟಿ ಅಂಚಿನಲ್ಲಲ್ಲದೆ 
ಕಣ್ಣ ಮಿಂಚಿನಲ್ಲಾದರೂ ಸಿಗಬಹುದೆಂಬ 
ಹುಂಬು ಗೆರೆಗಳ ಸಾಲು!!

ಊತ ಕಂಡ ಪಾದಗಳಿಗೆ
ಊರ ತುಂಬ ಗೆಳೆಯರು,
ಇನ್ನೂ ಕುಟ್ಟುವವರು ಕೆಲವರು
ಗೋರಿ ಕಟ್ಟಿನಡಿ ಹಲವರು;

ತವರು ಮರೆತ ಹೆಣ್ಣಿಗೆ
ಅಪರೂಪದ ಸಡಗರ,
ದೂರದೂರ ನಂಟು ಮುರಿದು
ಇದ್ದ ಮನೆಯೇ ಪಂಜರ!!

                           -- ರತ್ನಸುತ

Comments

  1. ಜೊತೆಗಾರರಲ್ಲಿ ಹಲವರು ಗೋರಿಯಡಿ ಮಿಕ್ಕವರು ಕುಟಣಿಯಲಿ ಇನ್ನೂ ಕುಟ್ಟುತ್ತಿದ್ದಾರೆ ಎನ್ನುವಂತಹ ದೃಶ್ಯ ಕಟ್ಟಿಕೊಟ್ಟ ರೀತಿಗೆ ಶರಣು.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩