Tuesday, 15 July 2014

ಬೊಂಬಾಟ್ ಭಾನುವಾರ

ಮುಗಿಲೆಲ್ಲ ಕರಿ ಕಂಬಳಿ ಹೊದ್ದು
ದಿನವೆಲ್ಲ ತೂಕಡಿಸುತಿದೆ
ಸಂಜೆ ವೇಳೆಗೆ ಆಕಳಿಸೆದ್ದು
ಧರೆಗಿಳಿವ ಸೂಚನೆಗಳಿದೆ!!

ಒಣಗಲು ಹಾಕಿದ ವಾರದ ಬಟ್ಟೆಗೆ
ಬಿಸಿಲಿನ ಯೋಗ ಸಿಗುತಿಲ್ಲ
ಮೂದಲಿಸುತ್ತಿದೆ ಹಿತ್ತಲ ಹೂವು
ನಗುವಿಗೆ ಕಾರಣ ಇನ್ನಿಲ್ಲ!!

ಯಾವುದೋ ಸೋಗಲಿ ಬೀಸುವ ಗಾಳಿ
ಚಳಿಯಲಿ ಬೇಯಿಸಿ ಬಿಡುತಿತ್ತು
ಆಷಾಢದ ಏಕಾಂತದ ಹುಣ್ಣಿಗೆ
ನಿಂಬೆ ಹುಳಿ ಹಿಂಡುವ ಹೊತ್ತು!!

ಕೊಡೆಗಳು ಉಳಿದವು ಕೆಲಸಕೆ ಬಾರದೆ
ಬಾಗಿಲಲಿಗೋ-ಅಗೋ ಎಂದು
ರೆಪ್ಪೆಗಳೋ ಬಿಗಿದಪ್ಪಿವೆ ಕೂಡಲೆ
ವಿರಹದ ತಾಪಕೆ ಮನ ನೊಂದು!!

ಉಗುರು ಕತ್ತರಿಸಿದ ಕರಗಳಿಗೆ
ಬೆಳ್ಳುಳ್ಳಿಯ ಬಿಡಿಸುವ ಶಾಪ
ಕಣ್ಣೀರಿಗೆ ಕಾರಣವಾದವು
ಬೆಲೆ ಏರಿದ ಈರುಳ್ಳಿಯ ಕೋಪ!!

ನಾಟಿ ಕೋಳಿಯ ಬಸಿದ ಸಾರು
ನಾಲಿಗೆ ಸೊರಗುಟ್ಟಿತು ಹಾಗೆ
ಮುದ್ದೆ ಉಂಡು ಹೊಡೆದಲು ನಿದ್ದೆ
ಆ ಸುಖ ಬಣ್ಣಿಸಲಿ ಹೇಗೆ?!!

                              -- ರತ್ನಸುತ 

No comments:

Post a Comment

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು ನೀನಿರದೆ ಈ ಗತಿ ಸಿದ್ಧಿಸಿತು ಜೀವಕೆ ಹಾಡುಹಗಲಲ್ಲಿ ನೀ ಆವರಿಸಿಕೊಂಡಿರುವೆ ಕನಸೊಂದು ಬೀಳುತಿದೆ ಗೊತ್ತಿದ್ದೂ ಬಾವಿಗೆ ಬ...