ಹರಿಶ್ಚಂದ್ರರು

ಹೆಣ ಕೊಯ್ಯುವ ಕಸಾಯಿಗೆ
ಹಸ್ತದ ನಾಜೂಕುತನ
ಎದೆಯ ಬಂಡತನ
ಕರುಳ ತಾಯ್ತನ
ಸುಕ್ಕು ಹೆಗಲ ಒರಟುತನಗಳು
ಅರಿವಿಗೆ ಬರುವುದುಂಟೇ?!!

ಉದರದಲ್ಲಿ ಸಿಕ್ಕ ದುರ್ಮಾಂಸವ
ಕೊನೆ ಬೆರಳಲ್ಲಿ ಹಾಗೆ ತೀಡುತ್ತ
ಕಳೆದ ರಾತ್ರಿ ಬೇಯದ ಮುದ್ದೆಯೊಂದು
ಬಿರಿಯಾನಿ ಗುಡ್ಡೆಯೊಳಗೆ ಸಿಕ್ಕದ್ದು ನೆನಪಾಗಿ
ಅಸಡ್ಡೆ ಮೂಡುತ್ತದೆ!!

ಇಡಿ ದೇಹದ ಚರ್ಮ ಸುಲಿದು
ಯತಾವತ್ತಾಗಿ ಮತ್ತೆ ಹೊಲಿದವನು
ಈ ತನಕ ತಾನು 
ಕಳಚಿ ಬಿದ್ದ ಶರ್ಟಿನ ಗಿಂಡಿಯ
ಹೊಲಿದುಕೊಳ್ಳುವಷ್ಟು ಪುರುಸೊತ್ತಿಲ್ಲದವ!!

ಅರೆ ಬೆಂದ ತೊಗಲಿಗೆ
ಚೂರಿ ಹಾಕುವ ಮುನ್ನವೇ
ಕಿತ್ತು ಬರುವುದನ್ನು ಕಂಡವನಿಗೆ;
ಬಯಕೆ ಅರಿತ ಮಡದಿ
ಸಾರಾಯಿ ಬುಡ್ಡಿ ಜೊತೆಗೆ
ಚಿಕನ್ ಕಬಾಬಿನೊಡನೆ
ಹೊಸ ಸೀರೆ, ಮೊಲ್ಲೆ ಮುಡಿದು
ಕಾಯುವೆನೆಂದದ್ದು ನೆನಪಾದಂತೆ
ನಸುನಕ್ಕು ಸುಮ್ಮನಾಗುತ್ತಾನೆ!!

ಹುಟ್ಟೇ ಕೊನೆಯಾದಮೇಲೆ
ಹುಟ್ಟು ಮಚ್ಚೆಗಳಿಗೆಂಥ ಮಾನ್ಯತೆ;
ಲೆಕ್ಕ ಹಾಕುವುದಿರಲಿ
ಸುತಾರಾಮ್ ಗಮನಿಸುವುದೂ ಇಲ್ಲ;

ಸತ್ತು ಪ್ರಶಾಂತವಾದ ಕಣ್ಣು;
ಆಗಾಗ ರೆಪ್ಪೆ ಸರಿಸಿ
ಮೇಲ್ಚಾಚಿದ ಗುಡ್ಡೆಗಳಿಗಳ ಕಂಡು
ಗಡ್ಡ ಗೀರಿಕೊಳ್ಳುತ್ತಾನೆ!!

ಬೀಡಿ ಘಾಟಿನ ನಂಟು
ಬಾಯ್ಸುಟ್ಟರೂ ಬಿಡಿಸಲಾಗದ್ದು;
ಸ್ವಚ್ಛೆದೆಯ ಶ್ವಾಸಕೋಶದೊಳಗೆ
ತನ್ನ ಹೆಮ್ಮಯ ಪತಾಕೆಯ ನೆಟ್ಟು
ಗಹಗಹಿಸಿ ನಗುತ್ತಾನೆ
"ಸಾಯೋ ಮುಂಚೆ ಹಾಳಾಗ್ರೋ,
ಬದ್ಕಿರೋದೇ ಹಾಳಾಗಕೆ!!"
ಸಾರಿ, ಸಾರಿ ನುಡಿದು!!

"ಹಂದರಕ್ಕೂ, ಮಂದಿರಕ್ಕೂ
ವ್ಯತ್ಯಾಸವೇನಿಲ್ಲ
ಎರಡೂ ಹುಡುಕಿದರೆ ಸಿಗುವಂತವು;
ಮಂದಿರದಲ್ಲಿ ದೇವರಿಲ್ಲ,
ಹಂದರದಲ್ಲಿ ಜೀವವಿಲ್ಲ....."
ತತ್ವಶಾಸ್ತ್ರ ಪ್ರವೀಣನೀತ!!

ವಾರಸುದಾರ ಸತ್ತು ಹತ್ತು ವರ್ಷ
ಮಡದಿ ಕೈ ಕೊಟ್ಟು ಇಪ್ಪ್ಪತ್ತು ವರ್ಷ
ನೆಂಟ-ಇಷ್ಟರೆಲ್ಲ ಎಂದಾದರೊಮ್ಮೆ
ಇವನ ಬೇಟಿಯಲ್ಲೇ ಕೊನೆಯಾಗುವರು;
ಮಣ್ಣು ಮುಕ್ಕುವ ಮುನ್ನ,
ಸುಟ್ಟು ಬೇಯುವ ಮುನ್ನ!!

                               -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩