Sunday 27 July 2014

ಕವಿತ್ವ

ಅರ್ಧ ಓದಿ ಬಿಟ್ಟ ಕವಿತೆ ನಿನು;
ಏನೇ ಅರಿತರೂ ಅಪೂರ್ಣ
ಅನಿಸಿದ್ದೆಲ್ಲವೂ ಅಪೂರ್ವ
ನೆನಪಲ್ಲುಳಿದದ್ದು ಚೂರು
ಮರೆತ ಪದಗಳು ನೂರು
ಅಂತ್ಯವೋ ಅನಂತ
ಗ್ರಹಿಕೆ ದಿಗಂತ
ಮತ್ತೆ ಮತ್ತೆ ಓದ ಬಯಸಿದ
ಗುರುತಿಡದ ಗೌಪ್ಯ ಹಾಳೆ!!

ಮೊದಲಿಂದ ಶುರುವಾಗಿ
ಅದೆಲ್ಲೋ ಮಗ್ನನಾಗಿ ಮೈಮರೆತು
ನಡು ನಡುವೆ ಸಣ್ಣಗೆ ತಡವರಿಸುತ್ತ
ಮೈಲಿಗಲ್ಲುಗಳಿಲ್ಲದ ರಸ್ತೆ ಬದಿಯಲ್ಲಿ
ಧೂಳಿಡಿದ ನಾಮ ಫಲಕಕ್ಕೆ
ಸೋನೆ ಮಳೆ ಪುನಃಷ್ಚೇತನಗೊಳಿಸಿದಂತೆ
ಹೃದಯ ಶುಭ್ರವಾದಾಗ
ಮತ್ತೆ ಅರ್ಧಕ್ಕೇ ನಿತ್ರಾಣನಾಗುತ್ತೇನೆ!!

ಪದವಿಲ್ಲದ ಸಾಲುಗಳ ಕೂಡಿಸುತ್ತ
ಕಣ್ಣ ಸುತ್ತ ಹರಿದ ತೊರೆ ತೊರೆಯ
ಸೆರೆ ಹಿಡಿದು ಸೇರಿಸುವಾಗ
ನಿನ್ನಂತೆಯೇ ಒಂದು ನದಿ
ನನ್ನ ದಡವಾಗಿಸಿ ಸೋಕುತ್ತಿದ್ದಂತೆ
ಮುನ್ನುಡಿಗೆ ಕಾಯದ ಸಂಕಲನವಾದೇನು;
ಓದುವ ಹೊಣೆ ನಿನ್ನದೇ,
ವಿಮರ್ಶೆಗೆ ಕಲ್ಲಾಗಿ ಕಾಯುವೆ!!

ಕವಿತ್ವದ ಒಟ್ಟು ಸಾರಾಂಶ
ನಿನ್ನ ಮೂಗುತ್ತಿಯ ಮಿಂಚು,
ಅದೂ ನಾಚಿಕೊಂಡಾಗಲಷ್ಟೇ;
ವಿಪರೀತ ಅನಿಸುವ ಲಹರಿಯಲ್ಲಿ
ಉಸಿರಾಟ ಮರೆತು ಒಮ್ಮೆ ಕುಸಿದು
ನಿನ್ನ ನೆನಪ ಮಸೆದು
ಎದ್ದ ಶಾಖದಲ್ಲಿ ಎಚ್ಚರಾಗುವಾಗ
ಮೈ ಮುರಿದ ಸದ್ದ ನೀ ಕೇಳಬೇಕು!!

ಕಪಾಟಿನಲ್ಲಿ ಎತ್ತಿಟ್ಟರೂ
ಎದೆಯಲ್ಲಿ ಸದಾ ತೆರೆದುಕೊಂಡ 
ನಿನ್ನ ಮುಖ ಪುಟವ
ಹೊರಳಿಸಿ, ಹೊರಳಿಸಿ ಸಾಕಾಗಿ
ಮತ್ತೆ, ಮತ್ತೆ ಓದುವಾಗ
ನೀನಾಗಿಯೇ ಒಮ್ಮೆ
ಬೇರೇನಾದರೂ ಬರೆದು ಹೋಗಬೇಕು
ಹೆಸರ ಹಂಗು ತೊರೆದು ನನ್ನ ಕೂಗಬೇಕು!!

-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...