ಚಿತೆ ಬೆಂಕಿ ಬೆಳಕಲ್ಲಿ

ಚೂರೇ ತೆಗೆದ ಕಿಟಕಿಯ ನೆರವಿಗೆ
ತಂಗಾಳಿಯ ಪಿಸು ಮಾತಿನ ನಮನ
ತಾರೀಕನು ಧಿಕ್ಕರಿಸಿ ಹೊರಳಿದೆ
ಪಂಚಾಂಗಕೆ ಮತ್ತೆಲ್ಲಿಯೋ ಗಮನ

ಬಾಚಿ ಉದುರಿದ ಕುರುಳಿನ ಸುರುಳಿಯ
ಎರಡು ಗೋಡೆಯ ಮೂಲೆ ಹಿಡಿದು
ಪೂರ್ತಿ ಮುಗಿಸದ ಪುಸ್ತಕ ಹಾಳೆಯ
ವಜೆಯಂತೆ ಕನ್ನಡಕ ತಡೆದು

ಪಲ್ಲಂಗದ ಪಕ್ಕದ ಕಾಗದಕೆ
ಹಸ್ತಾಕ್ಷರ ಬೀಳದೆ ಒದ್ದಾಟ
ಬೇಡದ ಪದಗಳ ಬರಹವ ಖಂಡಿಸಿ
ಒಳಗೊಳಗೆ ತುಸು ತಿಳಿ ಗುದ್ದಾಟ

ಪರದೆಯ ಸರಿಸುವ ಸರಸದ ಆಟಕೆ
ಕಿಟಕಿ ಕೋಲುಗಳ ತಡೆಯಾಜ್ಞೆ
ಕನ್ನಡಿಯೊಳಗೆ ಸಿನಿಮಾ ತಾರೆಯ
ಎಂದೂ ನಿಲ್ಲದ ಪೋಲಿ ಸನ್ನೆ

ಎಣ್ಣೆ ಬಿಡಿಸಿದ ಬಾಗಿಲ ಅಳಲಿಗೆ
ನಿದ್ದೆಗೆ ತಡೆಯೊಡ್ಡುವ ಕೋಪ
ಸ್ವಪ್ನಗಳೆಲ್ಲವೂ ಸಾವನಪ್ಪಲು
ಹಗಲುಗನಸುಗಳ ಹಿಡಿ ಶಾಪ

ರೆಪ್ಪೆಯ ಸೋಕಿದ ಬೆಳಕಿನ ಕಿರಣ
ಹೆಣಗಳ ಚಿತೆಗೆ ಕೊಳ್ಳಿಯನಿಟ್ಟೋ
ಹಿಂದೆಯೇ ನೀಗಿತು ಹಾಳೆಯ ಹಸಿವು
ಇರಿಸಿದೆ ಜೇಬಿಗೆ ಮಡಿಸಿಟ್ಟು!!

                                 -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩