ಸಾವಿನ ಗುಟ್ಟು

ಗುಟ್ಟು ರಟ್ಟಾಗುವ ವೇಳೆ
ಬಯಲೆಲ್ಲ ಕಣ್ಣೀರ ಸುದ್ದಿ
ನಾನು ನನ್ನವುಗಳೆಲ್ಲ
ತಾಜಾ ಹೂಗಳ ಕೆಳಗೆ ರದ್ದಿ

ಅಲ್ಲಿ ಗೋಳಿಟ್ಟ ಹೃದಯಗಳಿಗೆ
ಸಾಂಬ್ರಾಣಿಯ ಹೊಗೆ
ಊದಿಕೊಂಡ ಕಣ್ಗುಡ್ಡೆಗಳೊಳಗಿಂದ
ನೆನಪುಗಳ ಒದ್ದೆ ಪಯಣ

ನೀಳ ಮೌನದ ನಡುವೆ
ಆಗಾಗ ಇಣುಕಿ ಜಾರಿಕೊಳ್ಳುವ
ಬಿಕ್ಕಳಿಕೆ ಸದ್ದು;
ತುಟಿಗಳೇನೂ ನುಡಿಯದೆ 
ಎಲ್ಲವೂ ನುಡಿದಂತೆ!!

ಮಣ್ಣಿನ ವ್ಯಾಮೋಹಕೆ
ಕೊನೆಗೂ ತೆರೆ ಎಳೆದ ಮಣ್ಣು;
ಉಸಿರಿನ ತಕರಾರೂ ಇಲ್ಲದ
ಚಿರ ನಿದ್ದೆಗೆ 
ಸಹಸ್ರ ಕಾವಲಿನ ಕಣ್ಣು!!

ಹೆಸರಿಗೂ ಅಲ್ಪ ವಿರಾಮ;
ಜನ್ಮಗಳ ಪಾಲಿನಲ್ಲಿ
ಒಂದು ಗೀಟಿಗೆ ಕಾಟು ಹೊಡೆದು
ಮುಂದೊಂದರ ತಯಾರಿಗೆ
ನಾಂದಿ ಹಾಡಿದ ಜವರಾಯ!!

ಸುಕ್ಕುಗಟ್ಟಿದ ಕೆನ್ನೆಗೆ
ಬೊಗಸೆ ನೀರ ಪ್ರೋಕ್ಷಣೆ
ನಾಳೆಗಳ ಕೌತುಕಕೆ
ತೊರೆದವರ ಪಟವ ಹೊತ್ತ
ತಡೆ ಗೋಡೆಯ ವೀಕ್ಷಣೆ!!

                    -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩