ಪುನಃ ಬದುಕಲಿ

ಕ್ಷುಲ್ಲಕ ಕಾರಣಕೆ ಉಂಟಾದ ಅಂತರಕೆ
ಪೀಠಿಕೆ ನೀಡುವೆನು ಬರಲು ಬಳಿಗೆ
ಸತ್ತು ಕಟ್ಟಿದ ನಮ್ಮ ಪ್ರೇಮ ಗೋರಿಯ ಮೇಲೆ
ತೆರೆದುಕೊಂಡರೆ ಒಲಿತು ಹೂವ ಮಳಿಗೆ!!

ಇದ್ದು ಹೇಳದ ಮಾತು, ಕದ್ದು ಕೇಳಿದವಲ್ಲಿ
ಯಾವೊದೂ ಮುದ ನೀಡುತಿಲ್ಲವೇಕೆ?
ನೆರಳ ದೂರಾಗಿಸಿದ ಒಡಲ ಬೇಗುದಿಯಲ್ಲಿ
ಜೀವಂತ ಕಣಗಳನು ಹುಡುಕ ಬೇಕೆ?!!

ನಂಬಿದ ತೋಳುಗಳ ಮದ ಇಳಿಸಲೇ ಬೇಕು
ವಿಷಕಾರಿ ವಿಷಯಗಳ ಹಂಚಿಕೊಂಡು
ಕೊನೆವರೆಗೂ ನಕ್ಕಂತೆ ನಟಿಸಬೇಕಿದೆ ನಾವು
ಗೊತ್ತಾಗದಂತೆ ಕಣ್ತುಂಬಿಕೊಂಡು!!

ಬಲವಾದ ಪೆಟ್ಟೊಂದು ಜ್ವರ ತರಿಸಿ ಬಿಟ್ಟದ್ದು
ಬೆನ್ನ ಹಿಂದೆ ಮರೆಸಿ ಇಟ್ಟ ಗಾಯ
ನಿನ್ನ ಕಣ್ಣೊಳು ನಾನು, ನನ್ನ ಕಣ್ಣೊಳು ನೀನು
ಕರಗಿ ಹೋದರೆ ಉಳಿವುದೆಮ್ಮ ಪ್ರಾಯ!!

ಅಂಗೈಯ್ಯ ಮೇಲೊಂದು ಹಸ್ತಾಕ್ಷರದ ಗುರುತು
ಒಪ್ಪಂದ ಮುರಿದರೂ ಕರಗದಂತೆ 
ಕೆನ್ನೆ ತೋಯ್ದರೂ ಇಲ್ಲಿ ನಿರ್ವಾಣ ಸ್ಥಿತಿಯಲ್ಲೇ
ಉಳಿದೆವೊಮ್ಮೆಯೂ ಹಾಗೆ ಒರೆಸದಂತೆ!!

ಮುಚ್ಚಿಡುವೆ ಸಾಕಾಗಿ, ಹೊತ್ತಿಸುವೆ ಬೇಕಾಗಿ
ಪ್ರೇಮ ಪತ್ರಗಳಾವೂ ಇನ್ನು ಸಲ್ಲ
ಉರುಳಿ ಬಿದ್ದ ಬಾಳನಿನ್ನೊಮ್ಮೆ ಕಟ್ಟಿದರೆ
ಮತ್ತೆ ಹಿಂದಿರುಗಿದರೂ ಅಡ್ಡಿ ಇಲ್ಲ!!

                                        -- ರತ್ನಸುತ

Comments

  1. ಚಿರ ಯವ್ವನಿಗರಾಗುವ ಆಸೆ ಇರುವವರಿಗೆ ಕವಿಯ ಕಿವಿಮಾತು:
    ’ನಿನ್ನ ಕಣ್ಣೊಳು ನಾನು, ನನ್ನ ಕಣ್ಣೊಳು ನೀನು
    ಕರಗಿ ಹೋದರೆ ಉಳಿವುದೆಮ್ಮ ಪ್ರಾಯ!!’

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩