ಅಂತಿಮ ತಿರುವು

ಹೊರೆ ಹೊತ್ತ ಹೆಗಲ ಮೇಲೆ
ಚಾಚಿ ಮಲಗಿದವರ
ನೆರವೇರದ ಕನಸುಗಳ ಭಾರ;
ಮಿಥ್ಯ ಲೋಕದೊಳಗೆ
ಸತ್ಯ ಶೋಧದ ನಿಮಿತ್ತ
ಕಣ್ಣು ಮುಚ್ಚಿ ಸಾಗಿದವರ
ಕೆಸರ ಹೆಜ್ಜೆಯ ಸ್ವಚ್ಛಗೊಳಿಸಿ
ಕೈಗಳ ಎದೆಗಾನಿಸಿದೆವು!!

ಹೆಬ್ಬೆಟ್ಟು, ಹುಟ್ಟು ಮಚ್ಚೆ ಗುರುತು
ಎತ್ತರ, ತೂಕ, ಸುತ್ತಳತೆಗಳ
ದಾಖಲಿಸಿ ಪಡೆದ
ಗುರುತಿನ ಚೀಟಿ ಇರಲಿ,
ಹೊರಟ ಗುರಿತಾಣದ
ಲಿಖಿತ ವಿಳಾಸವನ್ನೂ ಜೀಬಿಗಿರಿಸದೆ
ಬೆತ್ತಲು ದೇಹಕ್ಕೆ ತಿಳಿ ಬಟ್ಟೆ ಸುತ್ತಿ
ದತ್ತಿ ಹತ್ತಿಯ ಮೂಗಿಗಿಟ್ಟೆವು!!

ಎಲ್ಲಿದ್ದವೋ ಹಸಿದ ಕಾಗೆಗಳು;
ಹಿಡಿ ಅನ್ನಕ್ಕೂ ಗತಿ ಇಲ್ಲದವಂತೆ
ಕಾಲು-ತಲೆ ಭಾಗವನ್ನ
ಹೆಕ್ಕಿ, ಕುಕ್ಕಿ ತಿನ್ನುವಾಗ
ಒಳಗಿನ ದೇವರಿಗೆ ಎಚ್ಚರವಾಗದಿದ್ದರೆ
ಅದೇ ಹೂತವರ ಪುಣ್ಯ;
ಕಲ್ಲು ಕಲ್ಲಿಗೂ ಇಲ್ಲಿ ಹೆಸರಿದೆ,
ಚಿಗುರೋ ಮುಳ್ಳಿಗೂ ಕ್ಷಮೆಯಿದೆ!!

ಒಮ್ಮೆ ಎದೆಗೆ ಕಿವಿಯೊಡ್ಡಿ
ಕೊನೆ ಮಾತುಗಳ ಆಲಿಸುವ;
ಛೇ ತಗೆ, ಮೂರ್ಖತ್ವದ ಪರಮಾವದಿ!!
ನೆರಳು ದಾಟಿ ಹೊರಟ ಮೇಲೆ
ಬಾಗಿಲನೇನು ಕೇಳುವುದು
ಹೊಸಲಿನ ಪಿಸುಗುಟ್ಟುಗಳ?
ಸುಮ್ಮನಿರುವುದೇ ಲೇಸು
ತನ್ನ ಪಾಡಿಗೆ ತನ್ನ ಬಿಟ್ಟು!!

ಆಗಾಗ ತೂಕಡಿಸಿಯೂ
ಮಲಗದೆ ತಲೆ ಕಾಯ್ದ ಹಣತೆ
ಈಗಲೂ ಬೆಳಗುತಿದೆ
ಕತ್ತಲ ಹಜಾರವ ದಿಟ್ಟಿಸುತ್ತ;
ಚಳಿ ಬಿಡಿಸಿಕೊಂಡ ಒಲೆ
ಚಿಮಣಿಗೂ ಜೀವ ನೀಡಿತು,
ಗಂಜಿ ಉಕ್ಕಿ ಚೀರುತಿದೆ
ಜೋಡಿ ಒಲೆಯೆಡೆಗೆ ಕೆಂಡವ ಸರಿಸಲು!!

                                     -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩