ಆತ್ಮ ನಿವೇದನೆ

ಒಲವು ಅಸ್ಥಿರ
ಮನಸು ಸ್ಥಾವರ
ಮಿಡಿತ ಮಧುರ;
ಕನಸ ಕಾತರಗಳ
ಕಣ್ಣಲ್ಲಿ ಧೂಳೆಬ್ಬಿಸಿದಂತೆ
ಜಿನುಗಿಸೋ ಕಲೆ
ಕಾಡಿಗೆಯ ದಿಗ್ಬಂಧನದ
ನಿನ್ನ ಕಣ್ಣಿಗಿದೆ, ಒಪ್ಪಬೇಕು!!

ಹೂವ ಆಧರ
ತಂಪು ಚಾಮರ
ಹೊನ್ನ ಸಿಂಗಾರ
ಬಣ್ಣ ಚಿತ್ತಾರವ
ಹೋಲುವ ನಿನ್ನತನಗಳ
ಬಣ್ಣಿಸಿ, ಬಣ್ಣಿಸಿ
ರೋಸುಹೋಗಿದೆ
ಸುಮ್ಮನಾದೆ ಅದಕೆ, ಕ್ಷಮಿಸಬೇಕು!!

ಕಾಯಿಸಿದ ಕಿರಾತಕ
ನೋಯಿಸಿದ ನತದೃಷ್ಟ
ಪೀಡಿಸಿದ ಪಿಪಾಸು
ಪ್ರೀತಿಸಿದ ಪಾಪಿ;
ಪಾತ್ರ ಪರಿವರ್ತಿಸುತ
ಬಂಧ ತಿರುಚಲು ಆಗ,
ಜೀವಮಾನದ ಘೋರ
ಶಿಕ್ಷೆ ವಿಧಿಸಬೇಕು!!

ಚಟಮಾರಿಯ ಹತೋಟಿ
ತುಂಟತನದ ಸ್ಥಿಮಿತ
ಪಾವು ಹೆಚ್ಚು ಸಹನೆ
ಚಿಟಿಕೆಯಷ್ಟು ಕೋಪ
ಇರುಸು ಮುರುಸು ತಾಳಿ
ದಿನದಂತ್ಯಕೆ ಸಣ್ಣ ಜಗಳ-
ಮಿಂದೆದ್ದ ಉಸಿರ
ಕಟ್ಟಿ ಬಿಡಿಸಬೇಕು!!

ನಿಷ್ಟೂರದ ನುಡಿ
ಕರ್ಪೂರದ ಉರಿ;
ಹೊತ್ತಿಸದೆ ಘಮಿಸಿ
ಹೊತ್ತಿಸಲು ಕೈ ಮುಗಿದು
ಕಾಯ ಬೇಕು,
ಕಾದು ಮಾಗ ಬೇಕು
ಮುಪ್ಪು ಹಣ್ಣಿನಲ್ಲೂ 
ಪ್ರೇಮ ಚಿಗುರಬೇಕು!!

              -- ರತ್ನಸುತ

Comments

 1. ಒಳ್ಳೆಯ ಪದ ಪ್ರಯೋಗ:
  ಚಟಮಾರಿ

  opening sixer:
  ಒಲವು ಅಸ್ಥಿರ
  ಮನಸು ಸ್ಥಾವರ
  ಮಿಡಿತ ಮಧುರ

  ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩