ಝುಮ್ಮಯಂ

ಒದ್ದೆ ತುರುಬನು ಬಿಗಿದು
ಕಣ್ಣ ಬೆಳಕಲ್ಲದ್ದಿ
ಹಾಲು ಕೆನ್ನೆ ಧರಿಸಿ
ಸೀಳೋ ನಗುವ ಚೆಲ್ಲಿ
ಬರಬೇಡ ನೀ ಹಾಗೆ
ನನ್ನ ಬಳಿಗೆ,
ಮೂಗುದಾರ ಕಿತ್ತು
ಶರತ ಚಳಿಗೆ!!

ಚರಣ ತಾಕಿಸುವಾಗ
ನಡುವ ಬಾಗಿಸಿ,
ಕಸೂತಿ ಕಲೆಯ
ರವಿಕೆ ತೋರಿಸಿ,
ಕಾಲೆಳೆವೆಯೇನು? ನೀ
ಮನ ಸೆಳೆವೆಯೇನು?
ಧ್ಯಾನ ಭಂಗಕೆ ನನ್ನ
ಈಡು ಮಾಡಿ!!

ಕಡುಗತ್ತಲ ಶಯ್ಯೆ
ಸುತ್ತ ಮಿಂಚುವ ಪರದೆ
ಸೊಳ್ಳೆ ಕಡಿದರೂ ಮುಧವು
ತಲೆ ದಿಂಬಿಗೂ ಒಲವು;
ನರ ತಂತಿ ಮೀಟದೆಯೇ
ಹರಿದ ಇಂಚರ ಗುಚ್ಚ
ತಳಮಳದ ಉಂಗುಟವು
ನಿರ್ವಿಕಾರ ಕುಂಚ!!

ಶುದ್ಧ ಸುಧ
ಪುಷ್ಕರಿಣಿಯ
ತೆರೆ ಮರೆಯ ಪೇಯ;
ಜಯ ಜಯ ಜಾಯೇ
ಜರ್ಜರಿತ ಮಾಯೆ
ಸುರತ ಸುರ ತಾಯೇ;
ಅಂಬೆಗಾಲಿಗೂ ನೋವು
ಪಾದಂಗಳ್ ಬಲಿತಿರೆ!!

ಅಧರ ಹೃದಯದ ಉದರ
ತುಂಬಲೆಂತು ಸಾಧ್ಯ,
ಕೊಡಗಟ್ಟಲೆ ಹಸಿವು
ಬಿರಿದ ಬಾವಿ;
ಬತ್ತಿ ಅಂಚಿನ ಚೂಪು
ಬೆಂಕಿ ಸೋಕದ ಉರುಯು
ವಿರಹದೆಣ್ಣೆಗೆ ಅಲ್ಲಿ
ಜ್ವರದ ತಾಪ!!

ಹೂವ ಕೊನೆ ಉಸಿರು
ಸಾಲು ಶವ ಯಾತ್ರೆ
ಹೂವಿಗೆ ಹೂವೇ,
ನಾರಿಗೂ ಹೂವೇ;
ಮುಟ್ಟಿ ನೋಡಲು ಹಣೆ
ಒಲೆಯ ಮೇಲಿನ ಹೆಂಚು,
ತುಟಿ ಮೇಲೆ ಹಿಂಗದ
ಮಂಜು-ಮುತ್ತು!!

                 -- ರತ್ನಸುತ

Comments

  1. "ಜಯ ಜಯ ಜಾಯೇ
    ಜರ್ಜರಿತ ಮಾಯೆ
    ಸುರತ ಸುರ ತಾಯೇ;"
    ನೆಚ್ಚಿಗೆಯಾಯಿತು.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩