ಸ್ವಗತಗಳು

ಬರಬಾರದಿತ್ತೇ ನೀನೊಮ್ಮೆ 
ಕಣ್ಣ ಹನಿಯೊಂದು ಜಾರಿ ಕಳೆದಂತೆ?
ಸಿಗಬಾರದಿತ್ತೇ ಈ ನಮ್ಮ 
ನೆನಪು ಮತ್ತೊಮ್ಮೆ ಮೈದುಂಬಿಕೊಂಡತೆ?

ನಗಬಾರದಿತ್ತೇ ನೀ ಅಂದು
ಅರಳೋ ಹೂವೊಂದು ಗುಟ್ಟನ್ನು ನುಡಿದಂತೆ?
ಕೊಡಬಾರದಿತ್ತೇ ಹೂ ಮುತ್ತು
ಮತ್ತೆ ಯಾವತ್ತೂ ನಾ ಬೇಡಿ ಸಿಗದಂತೆ?

ಬಲವಾಗದಿತ್ತೇ ಹಿಡಿ ಕೈಯ್ಯಿ
ನಾವು ಬೆಸೆದಂಥ ಬಂಧವ ಮುರಿದಂತೆ?
ಕೊರಳಲ್ಲೂ ಕಹಿಯ ವಿಷವಿತ್ತೇ
ಮಾತು ಕ್ರೌರ್ಯಕ್ಕೆ ತಿರುಗಿ ಇರಿದಂತೆ?

ಮನಸಾಗದಿತ್ತೇ ಮರುಳಂತೆ
ಹುಚ್ಚು ಕನಸೆಲ್ಲ ಕೂಡಿಟ್ಟುಕೊಂಡಂತೆ?
ಬಯಲಾಗದಿತ್ತೇ ನಮ್ಮೊಳಗೆ
ಒಲವು ಆಗಷ್ಟೇ ಮೈನೆರೆದ ಪದದಂತೆ?

ಸೊಗಸಾಗಿ ಸಿಗ್ಗು ಪಡಬೇಕೆ
ನವ ಜೋಡಿ ಮೊದಮೊದಲು ಸಿಕ್ಕಂತೆ?
ಹಳೆ ಜಾಡ ಗುರುತು ಹಿಡಿಬೇಕೆ
ಹೊಸತು ಗುರಿಯತ್ತ ಜೊತೆಯಲ್ಲಿ ನಡೆದಂತೆ?

ತಡ ಮಾಡದೆ ಮತ್ತೆ ಸೇರೋಣ
ಯಾವ ಸಂಕೋಚಕೂ ಚಿತ್ತ ಕೆಡದಂತೆ
ಬಿಡಲಾಗದೆ ಅಪ್ಪಿಕೊಳ್ಳೋಣ
ಜೀವ ಎರಡಾಗಲು ಗಡುವು ಕೊಡದಂತೆ!!

                                       -- ರತ್ನಸುತ

Comments

  1. ಅಸ್ತು ಎಂದರು ಇಷ್ಟ ದೈವಗಳೆಲ್ಲ. ಕೂಡುವ ಕಾಲವು ಸನಿಹಿತ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩