ಬಾಗಿಲ ಮರೆಯಲ್ಲಿ

ಬಂದು ಬಾಗಿಲಲ್ಲೇ ನಿಂತ ನಿನ್ನ
ತಲೆ ಬಾಗಿ ಕರೆಯಲೊಲ್ಲ ಅಲ್ಪ ಒಲವು
ದಣಿವಾರಿಸುವ ಗಡಿಗೆ ಬತ್ತಿ ಒಣಗಿದೆ
ಕುಶಲೋಪರಿಗೆ ಮುಂದಾಗದಲ್ಪತನವು!!

ಬೆರಳಾಡಿಸಿ ಬಿಟ್ಟ ಕೊಳವೀಗ ಬಯಲು
ಮುಳುಗದ ದೋಣಿಗೆ ತೇಲುವ ಮನಸಿಲ್ಲ
ಸಂಜೆಗಳು ಬಂದು ಹಾಗೇ ಮರೆಯಾದವು
ನಿನ್ನ ನೆರಳ ಕೊರಳೆದುರು ಏನೂ ಸೊಗಸಲ್ಲ!!

ಲೆಕ್ಕವಿಟ್ಟ ಚುಕ್ಕಿಗಳಿಗೆ ಸೊಕ್ಕು ಈ ನಡುವೆ
ಇಲ್ಲಿ ಮಿಂಚಿ ಮತ್ತೆಲ್ಲೋ ಮತ್ತೆ ಮಿನುಗುವಾಟ
ಇರುವೆಗಳೂ ಮರೆತು ಹೋದಂತೆ ಗೋಚರಿಸಿವೆ
ಇಬ್ಬರೂ ಸೇರಿ ಹೇಳಿ ಕೊಟ್ಟ ಜೇನ ಪಾಠ!!

ಕತ್ತಲ ಕೂಪದಲ್ಲಿ ಬೆಳಕಿಗೂ ಮಸಿ ಬಳಿದು
ಕುರುಡನೆದುರು ಕಪ್ಪು ಬಿಳುಪು ಪಾತ್ರ ಸಜ್ಜಾದೋ
ರಂಗ ಮಂಟಪ ನಮ್ಮ ಎದುರು ನೋಡುತಿದೆ
ದುರಂತ ಪ್ರೇಮ ನಾಟಕವ ಪ್ರದರ್ಶಿಸಲೆಂದಿದೋ!!

ಹೂವ ಪಕಳೆ ಕಿತ್ತ ಬೆರಳ ಬಣ್ಣ ಮಾಸಿಯೇಯಿಲ್ಲ 
ಕಿತ್ತಲೆ ಹಣ್ಣು ಸುಲಿದ ಘಮಲು ಜೀವಂತ
ನೀಲಿ ಮುಗಿಲ ಬೆತ್ತಲನ್ನು ಮರೆಸಿದ ಕಾರ್ಮುಗಿಲು
ಎಲ್ಲ ಗುರುತ ಅಳಿಸಲಿಕ್ಕೆ ತುಂತುರು ಧಾವಂತ!!

ಬಾಗಿಲಲ್ಲೇ ಉಳಿದೆಯೇಕೆ ಹಸಿ ಮೈಯ್ಯ ಹೆಣ್ಣೇ?
ತಾಯಿಯ ಹಳೆ ಸೀರೆಯುಂಟು, ಕೊಡುವೆ ಮೈ ತಡವಿಕೋ
ಕೊಡಲೆಂದೇ ಬರೆದಿಟ್ಟ ಎಷ್ಟೋ ಕಾಗದಗಳಿವೆ
ಗುಡ್ಡೆ ಹಾಕಿ ಹೊತ್ತಿಸುವೆ, ಮೈ ಚಳಿಯ ಬಿಡಿಸಿಕೋ!!

                                                               -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩