ಸೂತಕದ ಕವನ

ಹರಿವ ನೀರಿಗೆ
ಕಾಗದದ ದೋಣಿ ಮಾಡಿ
ಹರಿ ಬಿಡುವ ಮುನ್ನ
ಬೇಲಿ ಹೂಗಳ ಕಿತ್ತು
ಒಳಗೆಲ್ಲ ಹರಡಿಕೊಂಡೆ;
ಬರೆದುಕೊಂಡದ್ದು ಅಳಿವನಕ
ಯಾರಿಗೂ ಕಾಣದಿರಲೆಂದು!!

ಇದನರಿತ 
ಹೂವೊಳಡಗಿದ್ದ ಇರುವೆ
ಎಲ್ಲವನ್ನೂ ಬಯಲಿಗೆಳೆವ
ಹಂಬಲ ಹೊತ್ತು
ಓದುತ್ತಾ ಸತ್ತದ್ದು
ಪಾಪ ಆ ಹೂವಿಗೂ ಗೊತ್ತಾಯಿತು!!

ಮೊದಲೇ ಮರುಗಿದ
ಮೈಲಿಗೆ ಮೈಯ್ಯ ತಾನು
ಮತ್ತೊಂದರ ಸಾವಿಗೆ
ಸಿಂಗಾರಗೊಂಡಿದೆಯೆಂದರಿತು
ಹೂವಿಗೂ ಹೃದಯಾಘಾತ!!

ಶವಗಳ ಸಾಗಾಣಿಕೆ ನಡುವೆ
ಒಂದು ಸುಳಿಯಾದರೂ ಸಿಕ್ಕಿದ್ದರೆ
ತಳ ಸೇರುತಿತ್ತು ದೋಣಿ,
ದೊರೆವುದಾಗಿತ್ತು ಶಾಂತಿ
ಅಳಿವಿನಂಚಿನೆಲ್ಲಕ್ಕೂ!!

ನಿನ್ನ ಕೈ ಸೇರಬಾರದಿತ್ತಷ್ಟೇ ಹುಡುಗಿ!!
ಆದರೆ, ನೀನಾಗೇ ಹುಡುಕಿ ಬಂದೆ;

ಮೊದಲು ಇರುವೆ ಸತ್ತಿದ್ದ
ಹೂವ ಮುಡಿಗೇರಿಸಿಕೊಂಡು
ನೀನೂ ಮಡಿ ತಪ್ಪಿದವಳು,
ಆ ನಂತರ ಕಾಗದ ಬಿಡಿಸಿ
ಅಳಿದುಳಿದಕ್ಷರ ಓದುತ್ತ ಹೋದೆ;

ಕೊನೆಗೆ,
ಕೊನೆಯುಸಿರ ಸವರಿ ಕೂತು
ನನ್ನ ಮನಸಲ್ಲಿ
ಸೂತಕದ ಛಾಯೆ ಬಿಡಿಸಿ
ಹೆಣವಾಗಿಸಿದೆ ನನ್ನ!!

                        -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩