ನೀ ಎಲ್ಲಿರುವೆ?

ಕಿಸೆಯಲ್ಲೇ ಉಳಿದ ನೂರಾರು ಹಾಡುಗಳು
ಅಂಗ ವೈಕಲ್ಯಕ್ಕೆ ತುತ್ತಾಗ ಬಹುದೇ?
ಊರುಗೋಲಂತೂ ಸಿಕ್ಕಾಯ್ತು ಒಲವಲ್ಲಿ
ಮೂಖ ಮನಸು ಈಗ ಬಾಯಿ ಬಿಡಬಹುದೇ?!!

ಸ್ಥೂಲ ಹೃದಯದ ಆಳದಾಳದಲ್ಲಿಯ ಮಾತು
ಹೊರಚೆಲ್ಲುವ ಮುಂಚೆ ಮಾಸಿದಂತಾಗಿ,
ಮತ್ತೆ ಸಾಗಿದೆ ಪಯಣ ಮತ್ತೂ ಆಳಕೆ ಈಗ
ಖುದ್ದು ಜೊತೆಯಾದ ನನ್ನೊಳಗ ಅನುರಾಗಿ!!

ಕಾಯುತ ಕಾಯುವುದು, ಬೇಡದೆ ಬೇಯುವುದು
ಎದೆ ಚಿಮಣಿ ಹೊರಗೆಲ್ಲ ವಿರಹದ್ದೇ ಸುದ್ದಿ
ಈಗಷ್ಟೇ ಸ್ಥಿಮಿತಕ್ಕೆ ಬಂದ ಒಲವ ಕೂಸು
ರಕ್ಷಣೆಗೆ ಬೇಡುತಿದೆ ನಿನ್ನ ಹಳೆ ಕೌದಿ!!

ಹಠಮಾರಿ ಆಸೆಗಳು, ಹದ್ದು ಮೀರಲು ನಿಂತು
ಜಿದ್ದಾ-ಜಿದ್ದಿಯಲಿ ಸೋತಿಹುದು ಚಿತ್ತ
ಒಂದಲ್ಲ ಎರಡಲ್ಲ ಕೋಟಿ ಹೆಜ್ಜೆ ದಾಟಿ
ಧಾವಂತ ಪಯಣವಿದು ನಿನ್ನೂರಿನತ್ತ!!

ಮೈ ಸವೆದ ಜಾಡು, ಮೈ ಮುರುದ ಹಾಡು
ತಲುಪಲೆಂತೋ ನಿನ್ನ ಹುಟ್ಟೂರು ಮನೆಯ
ನೀನೇ ಎಂಬುದಕೆ ಕನಸ ಕುರುಹನು ಬಿಟ್ಟು
ಬೇರೆ ಏನಾದರೂ ಸುಳುವನ್ನು ಕೊಡೆಯ!!

ನಡುದಾರಿಯಲಿ ತಂಪು ನೆರಳ ಹೊಂಗೆ ಮರಕೆ
ನಿನ್ನ ಹೆಸರಿನ ಗುರುತ ಕೊಟ್ಟು ಬಂದಿರುವೆ
ದಾರಿ ತಪ್ಪುವ ಮುನ್ನ ಕಾಣು ಕಣ್ಣಿಗೆ ಒಮ್ಮೆ
ಓ ಮಾಯ ಕನ್ನಿಕೆ, ಹೇಳು ಎಲ್ಲಿರುವೆ?

                                             -- ರತ್ನಸುತ

Comments

  1. ಇದೇ ಅನ್ವೇಷಣೆಯು ನನಗೂ ಬೆಬಿಡದೆ ಕಾಡುತಿದೆ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩