ಕರಾಳ ಇರುಳುಗಳು

ಆಕಳಿಸುವ ಮುನ್ನ ದೇವರ ನೆನೆದು
"ಒಳ್ಳೆ ಕನಸು ಬೀಳಿಸು ಪರಮಾತ್ಮ" ಎಂದು
ಮುಚ್ಚಿದ ಕಣ್ಣುಗಳ ಸುತ್ತ
ಬೇಲಿ ನಿರ್ಮಿಸಿ, ಕಾವಲಿರಿಸಿಕೊಂಡರೂ
ಅದಾವ ಅಡ್ಡ ದಾರಿ ಹಿಡಿದು ಬರುತಾವೋ
ಪ್ರಾಣ ಹಿಂಡಿ ಹಿಪ್ಪೆ ಮಾಡಲು
ನಕಲಿ ಮುಖವಾಡ ಧರಿಸಿದ 
ಅನಾಮಿಕ ದುಃಸ್ವಪ್ನಗಳು?!!

ಕತ್ತಲ ನಿಲುವೂ ಒಂದೇ
ದಮ್ಮಯ್ಯ ಅಂದರೂ ಕರಗದು;
ಹಾಸಿಗೆ ಮುಳ್ಳಾಗಿ, ದಿಂಬೂ ಮುಳುವಾಗಿ
ಹೊದ್ದ ಚಾದರದೊಳೆಲ್ಲ ಹಸಿದ ಬೆಕ್ಕುಗಳ
ನಿಲ್ಲದ ಪರದಾಟ;
ಕನಸಲ್ಲಿಯ ಹೆಗ್ಗಣಗಳ ಹಿಡಿದು
ಕತ್ತು ಸೀಳಿ ನೆತ್ತರ ಹೀರಿದರಷ್ಟೇ ಉಪಶಮನ!!

ಕಪಾಟಿನ ತೆರೆದ ಬಾಗಿಲು
ಅನಾಥ ಗಾಳಿಯ ತಾಳಕೆ ಕುಣಿದು
ತೃಪ್ತಿಯಾಗುವಷ್ಟು ತಗಾದೆ ಮಾಡಿರಲು
ಗಂಟೆಗೊಮ್ಮೆ ರೋಗಗ್ರಸ್ತ ಗಡಿಯಾರ
ಕೆಮ್ಮಿ, ಕೆಮ್ಮಿ ಸುಮ್ಮನಾಗುವುದು
ಗಂಟೆಯವರೆಗೂ ನಿದ್ದೆ ತರಿಸದೆಲೆ!!

ಯಾರೋ ನಸುಕಿನ ಮುಸುಕಿನಲ್ಲಿ
ಬೇಲಿ ಸೀಮೆಗೆ ಬೆಂಕಿ ಇಟ್ಟರೆಂಬ ಗುಮಾನಿ;
ಕಮಟು ವಾಸನೆಗೆ ಮೂಗು ಮುಚ್ಚಿದೆ
ಮನಸಿಗೆ ಒಂದೇ ಅಸಮಾಧಾನ;
ಲಾಂದ್ರ ಹಿಡಿದು ಹೊರಟೆನೇ ಹೊರತು
ಬೊಗಸೆ ನೀರು ಕೊಂಡೋಗಿದ್ದರೆ
ಆಗಷ್ಟೇ ಚಿಗುರಿದ ಬಳ್ಳಿಯ ಉಳಿಸಬಹುದಿತ್ತು!!

ಈಗ ಎಲ್ಲವೂ ಸುಗಮ
ಎಲ್ಲೆಲ್ಲೂ ಕಾಲು ದಾರಿಗಳೇ
ಸಿಕ್ಕ-ಸಿಕ್ಕವರು, ಸಿಕ್ಕ-ಸಿಕ್ಕಲ್ಲಿ ಲಗ್ಗೆಯಿಟ್ಟು
ದಾಟಿ ಬಿತ್ತುತ್ತಿದ್ದಾರೆ ವಿಷ ಬೀಜಗಳ
ಕನಸುಗಳು ಹದಗೆಡುತ್ತಿವೆ 
ಇನ್ನು ಆ ಪರಮಾತ್ಮನೇ ಕಾಪಾಡಲಿ!!

                                -- ರತ್ನಸುತ

Comments

  1. ನಿಮ್ಮ ಈ ಕವನ ಓದುತ್ತಾ ಹೋದಂತೆ ನಡು ರಾತ್ರಿಯಲ್ಲಿ ನನಗೆ ಉಸಿರುಗಟ್ಟಿದಂತಾಗಿ, ಸಾವೇ ಅಭಿಮುಖವಾದಂತಾಗುವ ಕರಾಳ ಅನುಭವದ ಇರುಳುಗಳ ನೆನಪಾದವು.
    ದುಃಸ್ವಪ್ನದಂತಹ ಕತಾಳ ಕವನ!

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩