ಇನ್ ಲವ್ ವಿತ್ ಅ ವಾಂಪೈಯರ್

ಕೃಷ್ಣಮೃಗದ ಕೊಂಬಿನಲ್ಲಿ
ಇರಿದೆಯಲ್ಲ ಬೆನ್ನಿಗೆ
ರಕ್ತಪಾತ ಕಂಡು ಮೂರ್ಛೆ
ಹೋಗಬೇಡ ಮಲ್ಲಿಗೆ!!

ಸಂಜೆ ಸತ್ತ ಬೆಳಕಿನಲ್ಲಿ
ಏನು ನಿನ್ನ ಅಬ್ಬರ
ಸಾವ ಉಣಿಸುವಾಗ ನಿನ್ನ
ಮುಖದಲೇನು ಆಧರ!!

ಒಲವ ಸರೋವರದಲೊಮ್ಮೆ
ನಿನ್ನ ಅದ್ದಿ ನೋಡಲೇ?
ಕೆಂಪು ಮೆತ್ತಿ ಚಂದವಲ್ಲ
ಹಾಲಗೆನ್ನೆ ಕೋಮಲೆ!!

ನಿನ್ನ ಸಿಟ್ಟು-ಸೆಡವು ಎಲ್ಲ
ಚಿಟಿಕೆ ಘಾಟು ಮಜ್ಜಿಗೆ
ಹಿತವ ನೀಡುವಂಥ ಉರಿ
ಉದರ ತಂಪಿನೊಟ್ಟಿಗೆ!!

ಕೋರೆ ಹಲ್ಲಿನಲ್ಲೂ ನೀನು
ಅಪ್ರತಿಮ ಸುಂದರಿ
ನೆತ್ತರೀರುವಾಗ ಕಾಣಬೇಕು
ನಿನ್ನ ವೈಖರಿ!!

ಪ್ರೇತ ಅನಿಸುತೀಯ ನೀನು
ಭೀತರಾದ ಮಂದಿಗೆ
ಪ್ರೀತಿ ಹೊರತು ಕಾಣದೇನು
ಈ ನನ್ನ ಕಣ್ಣಿಗೆ!!

ಹೃದಯ ನಿನ್ನದಾದಮೇಲೆ
ನೆತ್ತರೂನೂ ನಿನ್ನದು
ನಿನ್ನ ಸೇರಿ, ಪ್ರಾಣ ಬಿಡುವ
ಭಾಗ್ಯವಷ್ಟೇ ನನ್ನದು!!

                    -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩