ಹೀಗಿದ್ದರೊಳಿತು

ಮುನ್ನುಡಿಗೆ ಮಂಪರು ತರಿಸುವ ಕವನಗಳ
ಗೀಚಿಟ್ಟು ಕೂತರೆ ಓದ ಬರಬೇಡ
ಬೇಕೆಂದೇ ಬಿಟ್ಟ ಖಾಲಿ ಹಾಳೆಗಳ
ನಿನ್ನ ನೆನಪ ಕುರುಹು ಎಂದನಿಸಬೇಡ

ಇಂತಿಷ್ಟು ಹಠದಲ್ಲಿ ಇನ್ನಷ್ಟು ಗೋಗರೆವೆ
ಅಪ್ಪಿ-ತಪ್ಪಿಯೂ ನೀ ಹಿಂದಿರುಗಬೇಡ
ಬಹಳಷ್ಟು ಮಾತುಗಳು ಕಣ್ಣೀರ ಬೇಡುವವು
ಯಾವುಗಳಿಗೂ ತೀರ ಲಕ್ಷ್ಯ ಕೊಡಬೇಡ

ಸಾವಿಗೆ ಶರಣಾಗಿ ಕತ್ತು ಸೀಳುವ ವೇಳೆ
ಹರಿತ ಖಡ್ಗದ ಮೇಲೆ ನಗುತ ಉಳಿ ಬೇಡ
ಚಿಂತೆ ಸಂತೆಯ ಸರಕು ಹೊತ್ತಿರಲು ತಲೆ ಮೇಲೆ
ಭಾರ ಚೀಲವ ಹೊತ್ತು ಎದುರು ಸಿಗ ಬೇಡ

ತಡರಾತ್ರಿ ಮಳೆಯಲಿ, ಮುಜಾವ ಕನಸಲಿ
ಸುಳಿದಾಡುತ ನೀ ನಿದ್ದೆಗೆಡಬೇಡ
ಬರಿಗೈಯ್ಯ ಸಿರಿಗೆ, ಬರಿ ಮಾತ ಮೋಡಿಗೆ
ಮರುಳಾಗಿ ಕೈ ಬೆರೆಳ ಚಾಚಿ ನಿಲ್ಲಬೇಡ

ಮನಸೆಂಬೋ ಮಂದಿರದಿ ಮಲ್ಲೆ ಮುಡಿದು ಬಂದು
ಧ್ಯಾನಸ್ಥನಾದವನ ದಣಿವಾಗಬೇಡ 
ಏನೂ ಬೇಡದ ನಿರ್ಲಿಪ್ತ ಭಾವುಕತೆ
ಮಾತುಕಥೆಗೆ ನಿಗದಿತ ಸಮಯ ಬೇಡ

ಎದುರಾದ ಪ್ರತಿ ಬಾರಿ ಹೊಸಬಳಂತೆ ನಟಿಸು
ಪರಿಚಿತ ಮುಗುಳು ನಗು ಬೀರಲೇ ಬೇಡ
ನಿನ್ನ ಹೃದಯ ಶುದ್ಧ, ಅಪ್ರತಿಮ, ಅದ್ವಿತಿಯ
ಹಾಳಾದ ನನ್ನದಕೆ ಬದಲಿ ಕೊಡಬೇಡ!!

                                       -- ರತ್ನಸುತ

Comments

  1. ನಿರೀಕ್ಷೆ ತುಸು ತೂಕವಿದ್ದರೂ ಕವಿಯ ಪ್ರಾಮಾಣಿಕತೆ ಮೊದಲು ಮನಸೆಳೆಯಿತು.
    ನಿಮ್ಮ ಇಚ್ಛೆಯಂತೆಯೇ ಸಿದ್ದಿಸುವಳು ಕಾವ್ಯ ಕನ್ನಿಕೆ ಮತ್ತು ನನಸ ಸುಂದರಿ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩