ತಿರಂಗಾ ತರಂಗ

ಬಿಳಿ ಸೀರೆಗೆ ಮುಳ್ಳು ತಾಕಿ
ಹರಿದಾಗಿನ ಸದ್ದ
ಯಾರೋ ಕದ್ದು ಕೊಂಡೋಗಿರಬೇಕು;
ಉಟ್ಟವಳಿಗೆ ಕೇಳಿಸಲೇ ಇಲ್ಲ!!

ಸ್ವತಂತ್ರ ದಿವಸಕ್ಕೆ
ಎಲ್ಲರಿಂದಲೂ ಸಂಭ್ರಮಾಚರಣೆ;
ಒಬ್ಬೊಬ್ಬರಾಗಿ ಹರಿದ ಸೀರೆಯ ಕಂಡು
ಗೊಳ್ಳೆಂದು ನಕ್ಕು ಸುಮ್ಮನಾಗುತ್ತಾರೆ,
ದೇಶ ಪ್ರೇಮದ ನೆನಪಾಗಿ;

ಹೀಗೇ ಆ ಸಂತೆ ಬೀದಿಯ ತುಂಬ
ಹರಿವಿನಾಚೆ ಕಂಡ
ಆರಿಂಚು ತೊಗಲನ್ನ್ನ
ಕಣ್ತುಂಬಿಸಿಕೊಂಡ ಸೋದರರು
ತಮ್ಮದೇ ಧಾಟಿಯ
ಊಹಾ ಸಾಮ್ರಾಜ್ಯದಲ್ಲಿ
ಅಟ್ಟಹಾಸ ಮೆರೆದು ವಾಪಸ್ಸಾಗುತ್ತಾರೆ!!

ಅತ್ತ, ಆ ಹೆಂಗಸು
ಸಂತೆಯೆಲ್ಲ ಸುತ್ತಿ
ಏನೋ ಕಳೆದವಳಂತೆ ಪರದಾಡುತ್ತ
ಮುಂದಿಟ್ಟ ಹೆಜ್ಜೆಯ ಹಿಂದೆಕ್ಕೆ,
ಹಿಂದಿಟ್ಟ ಹೆಜ್ಜೆಯ ಮುಂದಕ್ಕಿರಿಸುತ್ತ
ಇದ್ದಲ್ಲೇ ಬೆಂದುಹೋಗುತ್ತಾಳೆ;

ಯಾರೋ ಹಸಿರು ಸೀರೆಯುಟ್ಟ
ಛಲವಾದಿ ಹೆಂಗಸು
ಕೈ ಬೀಸುತ್ತ ಧಾವಿಸುತ್ತಾಳೆ;
ಹರಿದ ಭಾಗಕೆ ತನ್ನ
ಸೆರಗ ತುಂಡನು ಸೇರಿಸಿ
ತೇಪೆ ಹಾಕುತ್ತಾಳೆ!!

ತಂಪು ಗಾಳಿಯ
ಸಂಜೆ ಬಾನಿಗೆ
ಗಂಟು ಕಳಚಿದ ಸೀರೆ ಅಂಚು
ಹೊಂಬೆಳಕ ಸೋಸುವ
ತರಂಗದ ಮಡಿಲಾಗಿ
ಕೇಸರಿಯ ಹೊಸೆದುಕೊಳ್ಳುತ್ತದೆ!!

ನೆರೆದವರೆಲ್ಲ ತಿರಂಗಾ ಪ್ರತಿಮೆಯಲಿ
ತಾಯಿಯ ಪ್ರತಿರೂಪ ಕಂಡು
ಕೈಯ್ಯೆತ್ತಿ ನಮಸ್ಕರಿಸುತ್ತಾರೆ;
ಭಾರತಾಂಬೆ ನಗುತ್ತಾಳೆ
ನಿಜ ಸ್ವಾತಂತ್ರ್ಯದ ಆಚರಣೆಯಿಂದ!!

-- ರತ್ನಸುತ

Comments

  1. ’ಗಂಟು ಕಳಚಿದ ಸೀರೆ ಅಂಚು
    ಹೊಂಬೆಳಕ ಸೋಸುವ
    ತರಂಗದ ಮಡಿಲಾಗಿ’ ಬರುವ ಪ್ರತಿಮೆ ಮತ್ತು ಅದರ ಅನಾವರ್ಣವು ಮಾರ್ಮಿಕವಾಗಿದೆ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩