ಸಾವಿನ ದಡದಲ್ಲಿ

ಮತ್ತೆ ಮತ್ತೆ ತಾಕಿಸಬೇಡ
ನೊರೆ ಅಲೆಗಳ ಮನದ ದಡಕೆ;
ನೀ ಮುಟ್ಟಿ ಹೋದದ್ದು ಆಯಿತು...

ನೊರೆ ಗುಳ್ಳೆಗಳ ಸಾವಲ್ಲಿ ನನ್ನ ಬಿಟ್ಟು!!


ನೀ ಹೊತ್ತು ತಂದ ಕಪ್ಪೆ ಚಿಪ್ಪು,
ಮುತ್ತಾಗುವ ಮುನ್ನ ಸತ್ತ ಹನಿ,
ಮರಳು, ಶಂಖ, ಉರುಟುಗಲ್ಲು
ಅಂತ್ಯ ಸಂಸ್ಕಾರಕ್ಕೆ ಮೂಖ ಸಾಕ್ಷಿಯಾಗಿವೆ;


ಸೂರ್ಯ ಮುಳುಗುವ ವೇಳೆ
ತಣ್ಣನೆ ಗಾಳಿಗೂ ನಿನ್ನ ಸೋಂಕಿದೆ;
ಮರು ಉಸಿರನ್ನು ಬೇಡುತ್ತಿದೆಯಾದ್ದರಿಂದ
ಉಸಿರಾಟದಲ್ಲೇ ಸಾಯುವ ಭಯ ನನಗೆ!!


ಮರಳ ತೋಡಿ ಅಡಗಿಸಿಟ್ಟ ಕೈಗಳು
ಇನ್ನೆಷ್ಟು ಹೊತ್ತು ತಪ್ಪಿಸಿಕೊಳ್ಳಲು ಸಾಧ್ಯ?
ಕಣ್ಣೀರ ಒರೆಸಲಾದರೂ ಎದ್ದು ಬರಲೇ ಬೇಕು,
ಇಲ್ಲ, ಕಣ್ಣೀರ ಹರಿಸದಿರಬೇಕು!!


ನಿನ್ನ ಮೊರೆತಕ್ಕೆ ಮರುಕ ಪಟ್ಟ
ನನ್ನ ಅಸ್ಮಿತೆಗಳ ಸಾಲು ಶರಣಾಗತಿಯಲ್ಲಿ
ಸಣ್ಣ ಬಿಕ್ಕಳಿಕೆಗಳೆದ್ದರೆ
ನೀವಲು ಬಂದ ನೆಪದಲ್ಲೇ ಕೆನ್ನೆಗೆ ಬಾರಿಸು;


ಚಂದ್ರನ ಚೆಲ್ಲಾಟಕ್ಕೆ ಹುಟ್ಟಿಕೊಂಡ ಜೊನ್ನು
ನನ್ನೆದೆಮೇಲೆ ಅಚ್ಚೆ ಬಿಡಿಸುತ್ತಿದೆ;
ಚುಚ್ಚಿದ ಸೂಜಿಯಂಚಿನ ವಿಷ
ಹೃದಯವ ಮುತ್ತುವ ಮುನ್ನ
ಮತ್ತೊಂದು ಅಲೆಯೇರಿ ಬಾ,
ಹುಟ್ಟಿನ ಸಾವಿಗೂ
ಸಾವಿನ ಹುಟ್ಟಿಗೂ
ನಿನ್ನ ಮಡಿಲನ್ನೇ ತೊಟ್ಟಿಲಾಗಿಸು!!


                                       -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩