Tuesday, 25 November 2014

ಗಹನವಾದ ಗೀಟುಗಳು

ಬೆಂಕಿಯ ನೆರಳಲಿ ನಡುಗಿದ ಆತ್ಮಕೆ
ಮುಗಿಲೇ ನೀಡಿತು ಕಂಬಳಿ ಹೊದಿಕೆ
ಗಾಳಿಯ ಸಂಚಿಗೆ ಬೆಂಕಿಯು ಬೆಚ್ಚಿತು 
ಮುಗಿಲೂ ಬೆದರಿತು ಆತ್ಮದ ಜೊತೆಗೆ
ಸಾಗರ ದಣಿವನು ನೀಗಿಸಲಾಗದ
ಬೆತ್ತಲ ಮೋಡವ ಶಪಿಸುವ ವೇಳೆ
ಕಂಬನಿ ಜಾರಿತು ಸಣ್ಣಗೆ ಅಲ್ಲಿ
ಹಸಿವಿನ ಕ್ರಾಂತಿಯ ತಣ್ಣನೆ ಜ್ವಾಲೆ
ಮರದ ಗಾಯದ ಗೋಂದಿಗೆ ಅಂಟಿದ
ನೊಣಕೆ ಕೊನೆ ಉಸಿರಾಟದ ಸರದಿ
ಬುಡವು ಅಲುಗಾಡಿತು ನಿಂತಲ್ಲೇ
ಬೇರಿಗೆ ಒಪ್ಪಿಸಿ ಸಾವಿನ ವರದಿ
ಇದ್ದಿಲು ಉರಿದು ಸಾರಿತು ಸದ್ದನು
ಪುಟಿದ ಕಿಡಿಯನು ಅಪ್ಪಿತು ಸೆರಗು
ಅರೆ-ಬರೆ ಬೆಂದ ಮಾಂಸವ ಮೇಯಲು
ನರಿ ಹರಿಸಿದ ಕಣ್ಣೀರಿಗೂ ಕೊರಗು
ಚಿಟ್ಟೆ ಬರೆಯಿತು ಕಾಣದ ಹೂವಿಗೆ
ರೆಕ್ಕೆಯ ಬಸಿದು ಪ್ರೇಮದ ಪತ್ರ
ಬೆಟ್ಟದ ದೇವರ ಗೋಪುರ ಉರುಳಿ
ಉಳಿಯಿತು ಅಡಿಯಲಿ ನೆತ್ತರ ಚಿತ್ರ
ಮೌನದ ದಡದಲಿ ಮಾತಿನ ಸಂಭ್ರಮ
ಹತ್ತಿರವಾದವು ದೂರದ ಅಲೆಗಳು
ಎಲ್ಲವ ಮೀರಿ ತಪ್ಪಿಸಿಕೊಳ್ಳಲು
ಸಿಲುಕಿದೆ ನನ್ನದೇ ಮೋಸದ ಬಲೆಯೊಳು!!
                                   -- ರತ್ನಸುತ

No comments:

Post a Comment

ನನ್ನ ಕನಸು

ಪಕ್ಕದಲ್ಲೇ ನನ್ನ ಕನಸಿಗೆ ನಿದ್ದೆ ಹೊದಿಸಿ ನಾ ಎಚ್ಚರಗೊಂಡಿರುತ್ತೇನೆ ತೂಗು ತೂಕಡಿಕೆಯಲಿ, ನಡು ರಾತ್ರಿ ಮಂಪರಲಿ ... ಪೂರ್ತಿ ಮೈ ಮರೆಯದೆ, ಗೊರಕೆ ಹೊಡೆಯದೆ ಕೈ-ಕಾ...