Sunday 23 November 2014

ರತಿ-ಮತಿ, ಸ್ಥಿತಿ-ಗತಿ

ಚುಂಬನದಿಂದ ಚಂದವಾದುದ್ದಲ್ಲ
ಚಂಚಲತೆಯಿಂದ ಚಂದ ಕಣೆ
ನಮ್ಮ ಪ್ರೇಮ ಪುಸ್ತಕದ ಮುಖಪುಟ;

ಒಳೆಗೆಲ್ಲ ಗುಟ್ಟಿನನಾವರಣ,
ಅದರೊಳಗೂ ಗೌಪ್ಯತೆ
ಕೈ-ಕೈ ಹಿಡಿದು ಪುಟ ಹೊರಳಿಸುವಾಗ
ಗಮನ ಮಾತ್ರ ಮತ್ತೆಲ್ಲೋ!!


ನಿನ್ನ ಅಂಗಮುದ್ರೆಗೂ, ಅಂಗುಷ್ಠಕೂ
ಮೀಸಲಿಟ್ಟು ಬರೆದ ಕವನ
ಹರಿದ ಕಾಗದದ ಚೂರುಗಳಂತೆ
ಮರು ಹೊಂದಾಣಿಕೆಯ ಬಯಸಿವೆ;
ಜೋಡಿಸುತ್ತ ಕೂತರೆ ಇರುಳು ನಾಚಿ
ಕೆಂಪೆದ್ದು ಬೆಳಕಾಗಿಬಿಡಬಹುದು,
ತಗಾದೆ ತೀರುವಂತದ್ದಲ್ಲ!!


ನವಿರು ಕೂದಲ ಶೀಗೆಕಾಯಿ ಘಮ
ಮತ್ತದರ ಉನ್ಮತ್ತ ಘಾಟು
ಸೀದ ಹೃದಯಕ್ಕೆ ಸಣ್ಣ ಏಟು;
ಎಟುಕದಂತಿರಿಸಿದ ಬೆರಳಿಗೂ
ಮಿಟುಕದಂತಿರಿಸಿದ ರೆಪ್ಪೆಗೂ
ನಿತಂಬದ ಪಾರಾಯಣ!!


ಅಲ್ಲಲ್ಲಿ ತೊಡರಿದ ತಪ್ಪುಗಳ ತಿದ್ದಿ
ಒಪ್ಪುಗೆಯ ಪಡೆವುದೇ ಪುಣ್ಯ
ನಗೆ ಉಕ್ಕಿದರೆ ಬಾಳು ಧನ್ಯ!!


ಕೊನೆಗೊಂದು ಕೀಟಲೆ,
ಗಲಾಟೆಯಿಲ್ಲದ ಸಮರ;
ಚೆದುರಿದ ಚಾದರಕೆ ಎಲ್ಲವ ತಿಳಿಪಡಿಸಿ,
ಸರಿಪಡಿಸಿ ಗೌಣವಾಗಿಸಿದ ಮೇಲೆ
ಪುನರಾವರ್ತನೆಗಳಿಗೆ ಸುಕ್ಕಾಗಿ
ಹಾಲು ಚೆಲ್ಲಿದ ಬೆಕ್ಕಾಗಿ ಮುದುಡಿಕೊಂಡಾಗ
ಮಂದಹಾಸಕ್ಕೆ ಚಂದ್ರಹಾಸವೂ ನಾಚಿತು!!


                                       -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...