ಒಂದಿಷ್ಟು ತಿಳಿದದ್ದು

ಆಲದ ಮರದ ಕೆಳಗೆ
ಕಲ್ಲು ಬೆಂಚಿನ ಮೇಲೆ
ಕೂತು ತೂಡಿಸುವವನ ಕೇಳಿ ನೋಡು...

ಈ ಜಗತ್ತಿನ ಚಿತ್ರಣವನ್ನ
ಸೊಗಸಾಗಿ ಬಣ್ಣಿಸುತ್ತಾನೆ
ತಾ ಕಂಡ ಕನಸುಗಳ ಮಸಾಲೆ ಬೆರೆಸಿ!!


ಮದುವೆ ಮನೆಯ
ಬಚ್ಚಲ ಪಾತ್ರೆ ತಿಕ್ಕಿ ತಿಕ್ಕಿ
ಕೈ ಸವೆಸಿಕೊಂಡವಳ ಕೇಳಿ ನೋಡು
ಅದ್ಭುತ ರುಚಿಗಳ ಪಾಕ
ಆಯಾ ಪಾಕದ ಪದಾರ್ಥಗಳನ್ನ
ಪಟ್ಟಿ ಮಾಡುತ್ತಾಳೆ ಅಲ್ಲಲ್ಲಿ ಕಣ್ಣೀರು ಸುರಿಸಿ!!


ಬಸ್ ನಿಲ್ದಾಣದ ಆಜುಬಾಜು
ಭಿಕ್ಷೆ ಎತ್ತುತ್ತ ಕಾಲ ಕಳೆದವನ
ಸಮಯದ ಮಹತ್ವ ತಿಳಿದು ನೋಡು
ಸಮಯಕ್ಕೂ, ಚಿಲ್ಲರೆ ಕಾಸಿಗೂ
ಸಂಬಂಧ ಬೆಸೆದು ಬೋಧಿಸುತ್ತಾನೆ
ವ್ಯವಹಾರಸ್ತನಂತೆ ಹರಕಲು ಬಟ್ಟೆ ಧರಿಸಿ!!


ಆಸ್ತಿಕನ ವಿಚಾರಗಳಿಗಿಂತ
ನಾಸ್ತಿಕನ ವಿಚಾರಧಾರೆಯಲ್ಲಿ
ದೇವರನ್ನ ಹುಡುಕಿ ನೋಡು
ಜನನ, ಉಳಿವು, ಅಳಿವುಗಳ
ಸಂಪನ್ನ ಸತ್ವ ಸಾರದ ಅರಿವಾಗುವುದು
ಅಲ್ಲಲ್ಲಿ ಷರತ್ತುಗಳ ದಂಡ ವಿಧಿಸಿ!!


ಒಂದೇ ದಿನದ ಬದುಕೆಂದರಿತರೂ
ಆ ದಿನದ ಮಟ್ಟಿಗೆ ಸಂಪೂರ್ಣ ಬದುಕುವ
ಹೂವಲ್ಲಿ ಬದುಕಿನ ಕುರಿತು ಅರಿತು ನೋಡು
ಚಿಕ್ಕ ಚಿಕ್ಕ ವಿಷಯಗಳ
ವಿಶೇಷವಾಗಿಸಿಕೊಳ್ಳುವ ವಿಚಾರ ಮೂಡುತ್ತದೆ
ವಿವೇಚನೆಗಳಿಗೆ ವಿವೇಕವ ತೊಡಿಸಿ!!


                                            -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩