ಚೀತ್ಕೊರಳ ಮೌನ

ತೆರೆದಿಟ್ಟ ಮನವೀಗ ಕೆನೆಗಟ್ಟಿದೆ
ಉಸಿರೆರೆದು ಸೋಸಿ ತಗೋ ನನ್ನೊಲವನು
ಎದೆಗೆದೆಯ ಕೊಟ್ಟೊಮ್ಮೆ ಕೇಳಿ ನೋಡು

ಮಾತಿಗೂ ಮೀರಿದ ಹಂಬಲವನು


ಅಂದಾಜಿಗೂ ಮೀರಿದ ಗೋಜಲ
ಹೆಣೆಯುತ್ತ ಎದೆ ವ್ಯಾಪ್ತಿ ಬಲೆಯಾಗಿದೆ
ಹೃದಯಕ್ಕೂ ನಿನ್ನನ್ನು ಬೆರೆಯುವಾಸೆ
ಆದರೆ ಪಾಪ ಬಲೆಯಲ್ಲಿ ಸೆರೆಯಾಗಿದೆ


ಕಂಡದ್ದು ಹುಸಿಗನಸು ಎಂದನಿಸಿದೆ
ನಿನ್ನ ನಿರ್ಗಮನದ ದಾರಿ ನೋಡುತಿರಲು
ಕಣ್ಣೆರಡು ಹಿಡಿದಿಡಲು ಸೋತಂತಿದೆ
ಬೇಡವೆಂದರೂ ಕಣ್ಣೀರು ಜಾರುತಿರಲು


ಮುಂಜಾನೆ ಮಂಜಲ್ಲಿ ಗಾಜು ಪರದೆ
ಅಲ್ಲಿ ಬಿಡಿಸಿಟ್ಟ ರೇಖೆಯಲಿ ನೀ ಮೂಡಿದೆ
ಸುಡು ಬಿಸಿಲ ಸರಸಕ್ಕೆ ನೀ ಕರಗಿದೆ
ನಿನ್ನ ಕಾಪಾಡಿಕೊಳ್ಳುವಲಿ ಸೋತು ಹೋದೆ


ಹೆಸರಿಟ್ಟು ಹೊರಡದಿರು ನೆನಪುಗಳಿಗೆ
ಯಾವ ಕ್ಷಣದಲ್ಲೂ ತಾವು ಪುಟಿದೇಳಬಹುದು
ಚೂಪುಗಲ್ಲಿನ ಹಾದಿ ನಿನ್ನ ಹೊರತು
ಹರಿದ ರಕ್ತವಾದರೂ ನಿನ್ನ ಸೋಕಬಹುದು!!

 
                                        -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩