ನಮಗೊಂದು ಹೆಸರು ಕೊಡಿ

ನಮಗೆ ಊರಿಲ್ಲ, ಸೂರಿಲ್ಲ
ಇದ್ದ ಕಾಡು ಈಗಿಲ್ಲ
ಜಿಗಿ-ಜಿಗಿದು ಮೆರೆಯಲಿಕ್ಕೆ 
ಕನಸಿನ ಕೊಂಬೆಗಳಿಲ್ಲ
ಕಸಿದು ತಿನ್ನುವ ಚಾಳಿ
ಬೇರೆ ದಾರಿ ತಿಳಿದಿಲ್ಲ;
ನಾವು ಯಾರೆಂದು ಕೇಳದಿರಿ
ನಮಗೆ ಹೆಸರೆಂಬುದೇ ಇಲ್ಲ!!
ಊರೂರು ಅಲೆದಲೆದು
ಪೀಡೆಗಳನಿಸಿಕೊಂಡೆವು
ಕೆಂಗಣ್ಣಿನ ಖಾರ ನೋಟಕೆ
ನಾವೂ ಸಹ ಬೆಚ್ಚಿದೆವು
ಹಸಿದಾಗ ವಿಧಿಯಿಲ್ಲದೆ
ನಿಮ್ಮ ಶಾಪಕೆ ಗುರಿಯಾಗಿ
ಸ್ವಾಭಿಮಾನವ ಬಚ್ಚಿಟ್ಟೆವು
ಚೂರು ಚೂರಾಗಿ!!
ಮಹಡಿಗಳ ಮೇಲೆ
ಓಡೋಡಿ ಗದ್ದಲವೆಬ್ಬಿಸಿದೆವು
ತುಂಟಾಟದ ವಯಸು ನಮದು
ಆಟಕೆ ಮೈದಾನಗಳಿಲ್ಲ;
ಯಾರೋ ಅಟ್ಟಿಸಿದರೆಂದು
ನಿಮ್ಮ ಮೇಲೆರಗಿದೆವು
ಆತ್ಮ ರಕ್ಷಣೆಯೇ ಹೊರತು
ಪರಚುವ ಮನಸಿಲ್ಲ!!
ಇನ್ನೂ ಪುಕ್ಕಲು ಮರಿಗಳ
ಎದೆಗೆ ಬಾಚಿ ಇಳಿದೆವು
ಹೋರಾಟದ ರಣರಂಗದಿ
ಸಮರವನ್ನೆದುರಿಸಿ;
ನಿಮ್ಮ ಹಿತ್ತಲ ತೆಂಗು
ಮತ್ತದರ ಗರಿ ಸಪ್ಪಳ
ಜೋಗುಳವಾದವು ನಮಗೆ
ತಂಬೆಲರ ಹೊದಿಸಿ!!
ಜಂಬೋ ಸರ್ಕಸ್ಸುಗಳಲಿ
ಬೀದಿ ಕುಣಿತ ನಾಟಕದಲಿ
ಮೃಗಾಲಯದ ಬೋನಿನಲ್ಲಿ
ಬಂಡವಾಳವಾದೆವು;
ಅಲ್ಲೆಲ್ಲ ಇಟ್ಟ ಹೆಸರು
ಒಪ್ಪುವಂತವಲ್ಲ ಎಮಗೆ
ಅದಕಾಗಿ ನಿಮ್ಮಲೊಂದು
ಬೇಡಿಕೆಯನ್ನಿಟ್ಟೆವು!!
                   --ರತ್ನಸುತ

Comments

  1. ಅಸಲು ಅವುಗಳ ಆವಾಸಸ್ಥಾನಗಳನೇ ನಾವು ಕಬಳಿಸಿದ್ದೇವೆ. ಈಗ ಅವುಗಳನ್ನೂ ನಾಮಾವಶೇಷವೂ ಇಲ್ಲದಂತೆ ಅಳಿಸಿಹಾಕುವ ಹುನ್ನಾರದಲ್ಲಿದ್ದೇವೆ!

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩