Tuesday 25 November 2014

ನನ್ನ ಕಥೆ

ನಾನು ಖಾಲಿಯಾಗಿದ್ದೇನೆ
ತುಂಬಿಸುವ ಪ್ರಯತ್ನಗಳು ಸೋತು
ಈಗ ಎಲ್ಲಕ್ಕೂ ತಿಲಾಂಜಲಿ ಹಾಡಲಾಗಿದೆ
ನನ್ನ ಹುಡುಕುವ ಕುತೂಹಲಕೆ
ಸಿಗದ ಎಲ್ಲ ಸುಳುವುಗಳೂ ಬಯಲಾಗಿವೆ
ನಾನಾರೆಂಬುದು ಪ್ರಶ್ನೆಯಲ್ಲ, ಅಪ್ರಸ್ತುತ ಪ್ರಲಾಪ
ನೀರಿನ ಬಣ್ಣಕ್ಕೂ, ಗಾಳಿಯಾಕಾರಕ್ಕೂ
ನಡುವಿನ ಸಣ್ಣ ಒಗಟು ನಾನು
ಕೈ ಚಾಚಿಕೆ ಸಿಗದ ಬಾನು, ಇನ್ನೂ ಹೇಳಹೋದರೆ ಮಣ್ಣು
ನನ್ನ ಕೂಗಿಗೆ ನಾನೇ ಮಾರ್ದನಿ
ಅದಕ್ಕೂ ನಾನೇ ಕಿವಿ;
ನಾ ಬರೆಯದ ಕವಿತೆಗಳಿಗೆಲ್ಲ ಸ್ವಯಂಘೋಷಿತ ಕವಿ
ನಾನು ಕನಸಿನ ಕತ್ತಲು
ಬೇಡದ ಕಾಮದ ನಡುವೆ ಹರಿವ ಕಣ್ಣೀರು,
ನಿರ್ಲಜ್ಜ ಬೆವರು
ನಾ ದೇವರ ಅನುಯಾಯಿ
ಎಂದೂ ಅವನ ಕಣ್ಣಿಗೆ ಬೀಳದವನು
ಅವನೇ ನಾನೆಂದು ಪ್ರತಿಪಾದಿಸುವವನು
ನಾ ನರಕದ ಬಾಗಿಲು
ಸ್ವರ್ಗದ ನಕಲಿ ಕೀಲಿ
ನನ್ನ ನೀಗಿಸುವುದು ಸಾವೊಂದೇ
ನಾನು ಖಾಲಿಯಾಗಿದ್ದೇನೆ…
                                               -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...