ಹೀಗೊಂದು ಮಿಂಚೋಲೆ

ನೀವು ಹಳ್ಳಿ ಜನ,
ನಾಗರೀಕತೆ ಚೂರು ಕಮ್ಮಿ;
ಒಳ್ಳೆಯವರು ಅಂದ ಮಾತ್ರಕ್ಕೆ...

ನಿಮ್ಮ ಸಂಬಂಧ ಬೆಳೆಸೋದು
ಮುಜುಗರದ ಸಂಗತಿ!!


ನಮ್ಮ ಮನೆಯ ನೆಲದ
ಮಾರ್ಬಲ್ಲಿನ ತಂಪಿಗೂ
ನಿಮ್ಮ ಮನೆ ರೆಡ್ಡಾಕ್ಸೈಡ್
ಸಾರಿಸಿದ ನೆಲದ ಅಂಟಿಗೂ
ಅಜಗಜಾಂತರ!!


ನಾವು ಮನೆಯಲ್ಲೆ ಪಾದ ರಕ್ಷೆ ಧರಿಸಿ
ಹೊರಗೊಂದು ಒಳಗೊಂದೆಂಬಂತೆ
ಬೇರೆ ಬೇರೆ ಜೋಡು ಇಟ್ಟವರು;
ನಿಮಗೆ ಹೊರಗಾಗಲಿ, ಒಳಗಾಗಲಿ
ಪಾದಗಳೇ ರಕ್ಷೆ!!


ನಮ್ಮ ಹುಡಿಗಿ ಪಟ್ಟಣದ ಜೀವನಕ್ಕೆ
ತೀರ ಒಗ್ಗಿಹೋಗಿದ್ದಾಳೆ;
ಇಲ್ಲಿಯ ಧೂಳು-ಹೊಗೆ ಮಿಶ್ರಿತ ಗಾಳಿ
ಫಾಸ್ಟ್ ಫುಡ್ ಕಲ್ಚರ್ರು
ಜನ ಜಂಗುಳಿ, ಹೊಟ್ಟೆ ಕಿಚ್ಚಿನ ಬೇಗೆ
ಕಾಂಕ್ರೀಟಾರಣ್ಯ, ಮಲ್ಟಿಪ್ಲೆಕ್ಸ್-ಮಾಲ್ಗಳು
ಅಲ್ಲಿವೆಯಾ?


ಹಸಿರನ್ನು ಆಸ್ವಾದಿಸಲು
ತಿಂಗಳಿಗೊಮ್ಮೆ ಟ್ರೆಕ್ಕಿಂಗ್ ಹೋದರೆ
ಆ ಸ್ವರ್ಗ ಮಜಭೂತಾಗಿರುತ್ತದೆ;
ಸ್ವರ್ಗದಲ್ಲೇ ವಾಸಿಸಿದರೆ
ಬೇಜಾರು ಹುಟ್ಟೋದು ಖಂಡಿತ;
ರೋಗಗ್ರಸ್ತ ಪಟ್ಟಣಗಳೇ ನಮ್ಮ ಆಯ್ಕೆ!!


ಕ್ಷಮಿಸಿ;
ನಿಮ್ಮ ಮಟ್ಟಕ್ಕಿಳಿವ
ಅನಿವಾರ್ಯತೆ ನಮಗಿಲ್ಲ,
ನಮ್ಮ ಮಟ್ಟಕ್ಕೇರುವ ಯೋಗ್ಯತೆ ನಿಮಗಿಲ್ಲ!!

ಇಂತಿ,
ಹೆಣ್ಣೆತ್ತ ನತದೃಷ್ಟರು....

                                        
                                        -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩