ಗಡಿಯಾರದ ಮುಳ್ಳು ಚುಚ್ಚಿಕೊಂಡು

ಕಾಲವನ್ನ ಹಿಂದಕ್ಕೆ ಸರಿಸಬೇಕು
ಗಾಡಿಯಾರದ ಮುಳ್ಳಿನೆದುರು ಬಿಕ್ಕುತ್ತ ಕೂತೆ,
ಯಾವುದನ್ನೂ ಲೆಕ್ಕಿಸದೆ ಮುಂದೆ ಸಾಗಿತು;...

ಜಾರಿದ ಕಂಬನಿಯನ್ನೂ ಹಿಂಪಡೆಯಲಾಗಿಲ್ಲ!!


"ಹೌದು" ಅಂದಿದ್ದ ಕಡೆ ಬೇಡವೆಂದು
ಬೇಡವೆಂದಿದ್ದ ಕಡೆ ಹೌದೆಂದು
ಬದಲಾವಣೆಗಳ ಗಮನಿಸಬೇಕಿತ್ತು;
ಗಡಿಯಾರ ಚೂರು ಮನಸು ಮಾಡಬಹುದಿತ್ತು!!


ದುಡುಕಿದ ಕಡೆ ಸಾವಕಾಶದಿಂದ
ನಿರ್ಭಾವುಕನಾದಲ್ಲಿ ಭಾವುಕತೆಯಿಂದ
ಚೂರು ಹಗುರಗೊಳ್ಳಬೇಕಿತ್ತು
ಗಡಿಯಾರ ಚೂರು ಮನಸು ಮಾಡಬಹುದಿತ್ತು!!


ಕಾಲೆಳೆದವರ ಕಾಲಿಡಿದು ಬೇಡಲು
ಕೈ ಕೊಟ್ಟವರ ಕೈ ಹಿಡಿದು ನಡೆಯಲು
ಕಣ್ಣಾದವರ ಕಣ್ಣಲ್ಲಿ ಕಣ್ಣಿಟ್ಟು ಕಾಯಲು
ಹುಣ್ಣಾದವರ ನೋವನ್ನು ಮಥಿಸಲು

ಅತ್ತವರ ಕೆನ್ನೆ ಸವರಲು
ಅಳ ಬೇಕಾದಲ್ಲಿ ಎದೆ ತುಂಬಿ ಅಳಲು
ಸೋಲನ್ನು ಗೆಲ್ಲಲು, ಗೆಲ್ಲಲೆಂದು ಸೋಲಲು
ಹಿಂದಕ್ಕೆ ಮರಳಿ ಹೊರಳಬೇಕಿತ್ತು
ಗಡಿಯಾರ ಚೂರು ಮನಸು ಮಾಡಬಹುದಿತ್ತು!!


ಗಡಿಯಾರ ನಿಂತಿತು
ಕಾಲ ಸಾಗುತ್ತಲೇ ಇತ್ತು
ಮುಳ್ಳನ್ನು ಹಿಡಿದು ಹಿಂದಕ್ಕೆ ನೂಕಿದೆ,
"ಮರುಳೇ" ಅಂದಂತೆ ಮುರಿದು ಬಿತ್ತು;
ವರ್ತಮಾನದ ಬೆರಳಿಗೀಗ
ಮುರಿದ ಗಡಿಯಾರದ ಮುಳ್ಳು ಚುಚ್ಚಿದೆ,
ನೋಡ ನೋಡುತ್ತ ನೆತ್ತರೂ, ನೋವೂ ಹಳಸುತ್ತಿವೆ!!


                                                    -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩