ದೂರದಿಂದಲೇ ಹತ್ತಿರವಾಗಿ

ಸಲುಗೆಯ ಮಟ್ಟವ ಏರಿಸು ಚೂರು
ಇನ್ನೂ ಸನಿಹಕೆ ಬರುವೆನು ನಾ
ನಿನ್ನ ಬೆರಳಿನ ತಕದಿಮಿಯಿಂದಲೇ...

ಬರೆಯದೆ ಮೂಡಿದೆ ರುಚಿಗವನ!!


ಭರಿಸುವೆ ನಿನ್ನಯ ನಗುವಿನ ಭಾರವ
ತುಂಬುತ ಹೋಗು ಎದೆಯೊಳಗೆ
ಮುಡಿಸುವೆ ಆಸೆಯ ಕಟ್ಟಿದ ಹೂವನು
ಕಣ್ಣಿಗೆ ಸಿಕ್ಕರೆ ಅರೆ ಗಳಿಗೆ!!


ನೆರಳಿಗೆ ನಾಚಿಕೆ ತರಿಸುವ ನಿನ್ನನು
ನೆಟ್ಟಗೆ ನೋಡುವುದೇ ಭಾಗ್ಯ
ಒಳ್ಳೆ ತನಗಳು ನಿನ್ನನು ನೆಚ್ಚಿವೆ
ಹಾಳಾದರೂ ಅದುವೇ ಪುಣ್ಯ!!


ಉಗುರಿನ ಮದಿರೆಯ ಹೀರಿದ ಗಲ್ಲಕೆ
ಅಂಟಿದ ಕೆಂಪನೆ ಲೇಪನ ನಾ
ಹುಣ್ಣಿಮೆಯೆಂಬುದು ಕೇವಲ ಕಲ್ಪನೆ
ನೈಜ್ಯತೆ ನಿನ್ನ ಆಗಮನ!!


ತೊರೆ ಹರಿವಿಗೆ ಧರೆ ವಿಧಿಸಿದ ತಿರುವಲಿ
ನೊರೆಯಾಗುವೆ ನಾ ತೊರೆ ನೀನು
ಮಳೆಗರೆಯುವ ಸಮಯಕೆ ನವಿಲಾಗು ನೀ
ನಿನ್ನಯ ಸೊಬಗಿಗೆ ಗರಿ ನಾನು!!


                                     -- ರತ್ನಸುತ

Comments

Popular posts from this blog

ಜೋಡಿ ಪದ

ಗರುಡ ಪ್ರಯತ್ನ ೩

ಗರುಡ ಗೀತ ಸಾಹಿತ್ಯ ೧