ಆಕೆಯ Someಕಲನದಿಂದ

ತಡ ಮಾಡಿ ಬರಬೇಡ
ಕೊಡಲೇನೂ ತರಬೇಡ
ಕೊಟ್ಟದ್ದು ಕೊಂಡದ್ದು ಲೆಕ್ಕಕಿಲ್ಲ;

ಮುಗಿಲಾದರದು ಕೂಡ
ತಡವಾಗಿ ಕರಗುವುದು
ಮೈದೆರೆದ ಬುವಿಗಾವ ಕೋಪವಿಲ್ಲ!!


ಅದು ಬೇಡ, ಇದು ಸಾಕು
ಇದ್ದುದ್ದರಲೇ ಬದುಕು
ಎಂಬೆರಡು ಮಾತಿನಲಿ ನಿಂತೆ ನಾನು;
ಅದುಮಿಟ್ಟು ಅಸೆಗಳ
ಹದಗೆಟ್ಟ ಬಯಕೆಗಳ
ಮೆದುವಾಗಿ ನಗುವಿನಲೇ ಕೊಂದೆ ನೀನು!!


ಸಿಹಿ ಗಾಳಿಯಲಿ ನಮ್ಮ
ಸಹಿಯಾದ ಒಪ್ಪಂದ
ಒಲವೆಂಬ ವಹಿವಾಟು, ಹೃದಯ ಸಂತೆ;
ನೂರೊಂದು ಮಾತಿನಲಿ
ನೆರವೇರದ ಬಂಧ
ಮೌನಕ್ಕೆ ಶರಣಾಗಿ ಹೊಸೆದುಕೊಂತೇ?!!


ತಡ ಮಾಡಿದೆ ಮತ್ತೆ
ಜಗಳಾಟಕೆ ನೀನೇ
ಹೊಸತೊಂದು ಕಾರಣವ ಕೆದಕಿ ಕೊಟ್ಟು;
ನಿನ್ನನ್ನು ಕಂಡಂದು
ನಾ ನೆಟ್ಟ ಹೂ ಬಳ್ಳಿ
ಬಾಗಿಹುದು ದಿನಕೊಂದು ಹೂವು ಬಿಟ್ಟು!!


ಮಬ್ಬಲ್ಲಿ ಮಸಿಯಾದ
ತುಟಿಯಂಚಿನ ಕವಿತೆ
ಮಡಿಲಾದುದು ಮತ್ತೆ ನಿನ್ನ ಕೆನ್ನೆ;
ಓದುವ ನೆಪದಲ್ಲಿ
ಮರೆಸಿಟ್ಟುಕೊಂಡವಳು
ಸಂಕಲನ ಹೊರ ತರುವ ಆಸೆಯೇನೆ?!!


                                   -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩