Monday, 31 March 2014

ಜೀವ ಪಟ

ನಾ ಹಾರಿಸಿದ ಗಾಳಿಪಟ
ನಿನ್ನ ಏದುಸಿರಿಗೆ ಸಿಕ್ಕಿ
ಗೋತ ಹೊಡೆಯುತಿದೆ
ವಿಪರೀತಕ್ಕೆಂದೂ ಪಳಗದಂತೆ

ಆಯ ತಪ್ಪಿ ಬಿದ್ದದ್ದು
ನಿನ್ನ ಉಪ್ಪರಿ ಮೇಲೆ;
ಪಟದ ಕಣ್ಣುಗಳೆರಡೂ 
ತೆರೆದುಕೊಂಡೇ ಇವೆ ಸತ್ತಲ್ಲಿಯೂ!!

ನೀ ಲೂಟಿಗೈಯ್ಯಬೇಕು
ಸೂತ್ರಕೆ ಬಿಗಿದ ನೂಲ;
ರಭಸದಲಿ, ನನ್ನ ಕೈ ಬೆರಳು ಸೀಳಿ 
ನೆತ್ತರು ನಿನ್ನ ಅಂಗೈಯ್ಯ ಮೆತ್ತ ಬೇಕು!!

ಬಾಲಂಗೋಚಿಯ ಕಿತ್ತು
ಗಾಳಿಗೆ ತೂರುವಾಗ
ನಾ ನಿನ್ನ ಹೊರತಾಗಿ ತೇಲುವ
ಅರಿವು, ನಿನಗಾಗಬೇಕು!!

ಕೊನೆಯಿಂದ ಕೊನೆವರೆಗೆ
ಚಾಚಿದ ನಡುಗಡ್ಡಿ
ಬಾಗಿದ ಬಿಲ್ಗಡ್ಡಿಗಳೆರಡೂ 
ಸಂಧಿಸಿದ ತಾಣ
ನಮ್ಮ ಗುರುತು!!

ಗುಟ್ಟಿನಕ್ಷರಗಳ 
ಗಟ್ಟಿ ಮನಸಲಿ ಬರೆದು
ಮುಟ್ಟಿಸಾಗಿದೆ ಇನ್ನು
ನೀ ಪಟಿಸುವಾಟ!!

ಒಪ್ಪಿದರೆ ಮುಗಿಲಿಗೆ
ಮತ್ತೊಮ್ಮೆ ಹಾರಿಸು
ತಪ್ಪನಿಸಿದರೆ ಹರಿದು
ಸಿಟ್ಟನ್ನು ಸೂಸು!!

ಮುಗಿಲ ಮುಟ್ಟುವ ಅದಕೆ
ಜೀವ ಪಟವೆಂದೆಸರು
ನಿನ್ನ ಕೈಲೆನ್ನ ಜೀವ 
ನಲ್ಲೆ, ಹುಷಾರು!!

            -- ರತ್ನಸುತ

ನಮ್ಮುಗಾದಿ !!

ಎಣ್ಣೆ ಸ್ನಾನ
ಬೇವು ಬೆಲ್ಲ
ಹಸ್ರು ತೋರ್ಣ
ಹೋಳ್ಗೆ ತಿಂಡಿ
ಸತ್ತೋರ್ಗೊಂದು
ಗಂಧದ್ ಕಡ್ಡಿ
ಕುತ್ಗೆ ಮೀರಿ
ಬೆಳ್ಕೊಂಡ್ ಬಡ್ಡಿ

ಹೊಸ ಬಟ್ಟೆ
ಹಳೆ ರಂಗು
ಎಲ್ಲೋ ಕೇಳಿದ್
ಹಾಡಿನ್ ಗುಂಗು
ದೇವಸ್ಥಾನ
ಮಸಾಣಕ್ಕೂ
ತಂದಿದ್ ಹೂವ
ಹೊಂದುಸ್ಬೇಕು

ಹುಣ್ಸೆ ಬೀಜ
ಕವ್ಡೆ ಕಾಯಿ
ಪಗ್ಡೆ ಬಿಲ್ಲೆ
ಇಸ್ಪೀಟೆಲೆ
ಗೋಳಿ ಗುಣಿ
ರಾಜ ರಾಣಿ
ಒಂಟಿ ಜೋಡಿ
ಚೌಕ ಬಾರ

ಈಚಲ್ಕಲ್ಲು
ಪ್ಯಾಕೆಟ್ ಸಾರಾಯ್
ಬ್ರಾಂದಿ, ವಿಸ್ಕಿ
ಜಿನ್ನು, ಸ್ಕಾಚು
ಬೀರು, ವೋಡ್ಕಾ
ಹೀರೋ ತನ್ಕ
ಮತ್ತು ಏರ್ದಂಗ್
ಸ್ವಲ್ಪ ನೋಡ್ಕ

ಗೆದ್ರೆ ಬೆಲ್ಲ
ಇಲ್ದಿದ್ರಿಲ್ಲ
ವರ್ಸತಡ್ಕು 
ಮರಿಯಂಗಿಲ್ಲ 
ಮುಲ್ಲಾ ಸಾಬಿಗ್
ಹೇಳಿಕ್ಬೇಕು
ಒಳ್ಳೆ ಮಾಂಸ
ಬೇಯಿಸ್ಬೇಕು

ಹಬ್ಬುದ್ದಿನ 
ಬೈಯ್ಯೋರಿಲ್ಲ
ಆಗಿದ್ದಾಗ್ಲಿ
ಹೋಗೋದ್ ಹೊಗ್ಲಿ
ನಮ್ಮುಗಾದಿ
ನಮ್ ಸ್ಟೈಲ್ನಾಗೆ
ಚಿಂತೆ ಯಾಕೆ
ತಗಿ ಅತ್ಲಾಗೆ!!

   -- ರತ್ನಸುತ

ಸಂಕ್ರಮಣ

ತುರುಬಲ್ಲಿ ಸಿಟ್ಟನ್ನ
ಕಣ್ಣಲ್ಲಿ ಘಾಟನ್ನ
ಎದೆಯಲ್ಲಿ ಬೆಂಕಿನ
ತುಂಬಿದವಳೇ ನಿನ್ನ
ಗುಣಗಾನ ಮಾಡುವುದು
ಎಷ್ಟು ಸರಿ-ತಪ್ಪೆಂದು
ಲೆಕ್ಕ ಹಾಕುತ್ತಲೇ 
ಆಯ್ತು ಸಂಕಲನ 

ನೀಯಾರು ಎಂದೆದ್ದ
ನೂರು ಪ್ರಶ್ನೆಗಳಲ್ಲಿ
ನೀ ಸಿಗದ ಉತ್ತರ-
-ವೆಂದರಿತ ನನ್ನೊಳಗೆ
ನಾನಾರೆಂಬುದೇ 
ಮರೆತಂತಾಗಿರಲು
ಹುಡುಕಾಟ ಎಬ್ಬಿಸಿತು
ದೊಡ್ಡ ಸಂಚಲನ

ಓರೆಗಣ್ಣಿನ ನೋಟ
ಕೆಮ್ಮಣ್ಣ ಗಲ್ಲ
ಸೊಕ್ಕಿದ ಅಧರ
ನಾಚದ ಅಂಗುಟ
ಬೆಳ್ಮುಗಿಲ ಸೊಬಗು
ಏರಿಳಿದ ಮೈ ಸಿರಿ
ತಿದ್ದಿ ತೀಡಿದವಷ್ಟೇ
ನಿನ್ನ ಸಮ್ಮಿಲನ

ಎಂಥವರ ಸಿಟ್ಟಿಗೂ
ಸಿಟ್ಟು ತರಿಸಲು ಬಲ್ಲ
ನಿನ್ನ ಉಕ್ಕಿನ ನಡೆ
ಕಾಲ್ಗೆಜ್ಜೆ ಸದ್ದು
ಮೌನದಲಿ ಗ್ರಹಿಸಿದ
ಇಂದ್ರಿಯಗಳೊಡನೆ
ನಡೆಸಿತು ನವಿರಾದ
ಮೌನ ಸಂವಹನ

ನಿವೇದನಾತುರದಲ್ಲಿ
ನಡುಗಿದ ನರಗಳು
ನುಂಗಿಕೊಂಡಾಡಿದ
ಹೊಮ್ಮದ ಪದಗಳ
ಪರಿಚಯಿಸದೆ ಹೋಗಿ
ಹೆಂಬೇಡಿ ಆದೆನು
ನಿನ್ನ ಜಾಗದಿ ಈಗ
ನೆನಪ ಸಂಕ್ರಮಣ

          -- ರತ್ನಸುತ

Sunday, 30 March 2014

ಬೆತ್ತಲಾಗುತ್ತಿದ್ದೇನೆ !!

ಸುಮ್ಮನಾಗುವುದಕ್ಕಲ್ಲ ಬೆತ್ತಲಾಗೋದು
ಮುಕ್ತವಾಗೋಕೆ ಮೈ-ಮನಸುಗಳು;
ಮಥಿಸಲಿಕ್ಕೆ ನಡುವಿನಂತರಗಳ
ಬೆರೆಯಲಿಕ್ಕೆ ಅನೇಕದೊಳಗೇಕತೆಯ ಹುಡುಕಿ!!

ಕಾಣದ ನಾವುಗಳು ನಾವಾಗಲು,
ಅಂತೆಯೇ ತಾವಾಗಲು
ಲಜ್ಜೆ ಬಿಟ್ಟು ಗೆಲ್ಲಬೇಕು ಒಬ್ಬೊಬ್ಬರ
ಸೋತ ಅಹಂ ಅದೆಷ್ಟು ಸುಂದರ!!

ಗಾಳಿ, ಬಳ್ಳಿ, ಹೂವು, ಮುಳ್ಳು
ಬೆತ್ತಲಾಗುವುದೇ ಇದಕೆ;
ಪ್ರಕೃತಿಯ ಸಹವಾಸಕೆ
ವಿಕೃತಿಯ ಸೆರೆವಾಸಕೆ

ಹೂವು ಮೈನೆರೆದು ಕಾಯಾಗಿ,
ಕಾಯಿ ಕಾಯದೇ ಹಣ್ಣಾಗಿ ಕೊಳೆತು,
ಮಣ್ಣಾಗಿ ಮೊಳೆತು,
ಎಳೆ ಚಿಗುರು ಕಂಡದ್ದು
ದಿಗಂಬರಾವರಣದಲಿ
ತನ್ನ ಸಹಜ ಸ್ಥಿತಿಯ!!

ಮೈ ಮುಚ್ಚಿಕೊಂಡವರು
ಗುಪ್ತವಾಗುತ್ತಾರೆ ಪ್ರಕೃತಿಯ ಪಾಲಿಗೆ
ಪರಸ್ಪರ ಶಂಕೆಯಲ್ಲೇ ಉಳಿದು
ದೂರಾಗುತ್ತಾರೆ ಹತ್ತಿರದಲ್ಲೂ!!

ಹುಟ್ಟು, ಸಾವಿನ ಹೋರಣದ ನಡುವೆ
ಆ ಸಣ್ಣ ಹೂರಣದ ಸಿಹಿಗೆ
ಎಟುಕದ ಜಿಗಿತ, ತಲುಪದ ಚಾಚು
ಸಾಗದ ದಾರಿ, ಸೇರದ ದಿಕ್ಕು
ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ!!

ಹೆಸರಿಲ್ಲದೆ ಜನನ
ಅದ ಲೆಕ್ಕಿಸದ ಪ್ರಕೃತಿ ಪ್ರಯಾಸ
ಅದ ಅಳಿಸೋ ಮರಣ
ಮೂರೇ ಅಸತ್ಯ ಹೂತು ಹಾಕಿದ ಸತ್ಯಗಳು!!

ಬೆತ್ತಲಾಗುತ್ತೇನೆ ಎಂದಾದರೊಮ್ಮೆ
ನೀಯತ್ತಿನ ಗುಲಾಮನಾಗಿ!!

                               -- ರತ್ನಸುತ

Saturday, 29 March 2014

ಬೇಸರದ ದಿನಗಳಲ್ಲಿ!!

ಬೆಳಕು ಹರಿದು ಸಾಕಷ್ಟು ಹೊತ್ತಾಗಿ
ತಡವಾಗಿ ತೆರೆದ ಕಣ್ಣುಗಳಂಚಿನಲ್ಲಿ
ತುಂಬಿಕೊಂಡಿದ್ದು ನೆನ್ನೆಯ ನೆನಪಿನ ಗೀಜು
ಮೂಗಿನಲ್ಲಿ ಅಟ್ಟುಗಟ್ಟಿದ ಸಿಂಬಳ
ನೆನ್ನೆಯ ಕರಾಳ ಘಮಲಿನ ಹೆಪ್ಪು,
ಉಸಿರಿಗೆ ಚೂರು ಒತ್ತಾಯದ ಬಿಸಿ

ಹೊದ್ದ ಕಂಬಳಿಯ ಮೇಲೆ ಹಾದು
ಗೋಡೆಗೆ ತಾಕಿದ ಬೆಳಕ ಸೇತುವೆ
ಅಣು ಅಣುವಿನಾಕಾರದ ಧೂಳಿನ ಸಂದೇಶಗಳ
ರವಾನಿಸುತ್ತಿದ್ದುದು ಗೋಡೆಗೆ ಕೇಳೋದುಂಟೆ?
ಕಾಣೋದುಂಟೆ?

ಸುತ್ತಲೂ ನಿರ್ಜೀವ ಜಡ ವಸ್ತುಗಳೇ;
ಮೂರು ವರ್ಷಗಳಿಂದ ನೀರೆರೆದು
ಸಾಕಷ್ಟು ಹಬ್ಬಿದ "ಮನಿ ಪ್ಲಾಂಟ್"
ಇನ್ನೂ ಹಸಿರೆಲೆಗಳನ್ನೇ ಬಿಡುತ್ತಿದೆ;
ಥೂ, ಹಳಾದ ಸೆಕೆ ಬೇರೆ!!

ಕಂಬಳಿ ಒದರಿದರೆ ಒಂದೇ ಬಿಸಿ-ಹಸಿ
ಕನಸುಗಳು ಚೆಲ್ಲಾಡಿ ಎಚ್ಚರಗೊಳ್ಳಬಹುದು,
ಮಡಿಸಿಡಬೇಕು ಮಗುವಂತೆ;
ನೆನ್ನೆ ಓದದೆ ಬಿಟ್ಟ "ಮಾಮೂಲಿ" ಪುಸ್ತಕದ
ಕೊನೆಯೆ ನಾಲು ಪುಟಗಳ 
ತಿರುವು ಹಾಕಬೇಕು
ಒಲೆ ಉರಿಸಲು ಹಾಳೆಗಳು ಸಾಕಾಗುತ್ತಿಲ್ಲ!!

ನೊಣಗಳೂ ಅನುಭವಿಸಿ ಬಿಟ್ಟ
ಚಹ ಲೋಟದ ಸ್ಥಿತಿ 
ಆ "ಮಾಮೂಲಿ" ಕಥಾ ನಾಯಕಿ
ರಾಮಿಯ ಹಾಗೆ;
ಸೂಳೆ ಮನೆಯೊಳಗೆ ಸತ್ತ
ಸೊಳ್ಳೆಯ ಹಾಗೆ!!

ಗಡಿಯಾರಕ್ಕೂ ಕೆಲಸವಿದೆ
ಕೂಲಿ ಕೊಡುವುದು ನನ್ನಿಷ್ಟಕ್ಕೆ ವಿರುದ್ಧ
ಗೋಡೆಗೆ ನೇತುಹಾಕಿದ ದೇವರು
ಎಂದಿನಂತೆ ನಗುತ್ತಿದ್ದ

ಕಣ್ಣಲ್ಲಿಯ ಗೀಜು ತೆಗೆದು
ಅಟ್ಟುಗಟ್ಟಿದ ಸಿಂಬಳವ ಉಂಡೆ ಮಾಡಿ
ಬಿಸಾಡುವಲ್ಲೇ ಎರಡು ತಾಸು;
ನೋಟಕ್ಕೂ, ಉಸಿರಾಟಕ್ಕೂ ನಿರಾಳ!!

ಮುಗಿಯುತ್ತಾ ಬಂದ ದಿನದಾರಂಬಕ್ಕೆ
ಒಂದು ಸಣ್ಣ ಆಕಳಿಕೆಯ ಶುಭ ಸ್ವಾಗತ!!

                                     -- ರತ್ನಸುತ

ಮುಗಿಯದ ಕವಿತೆ

ನಿನ್ನ ಬೆನ್ನಿಗಾನಿಸಿ
ಹಾಳೆ ಹಾರದಂತೆ ಹಿಡಿದು
ಗೀಚಿಕೊಂಡ ಪದ್ಯದಚ್ಚು
ಬೆನ್ನ ತುಂಬ ಮೂಡಿದೆ;
ಬರೆದುಕೊಂಡವೆಲ್ಲವನ್ನೂ
ಅರಿತುಕೊಂಡೆ ಆದ್ದರಿಂದ
ಮಡಿಸಿ ಜೇಬಿಗಿಟ್ಟುಕೊಂಡೆ
ಮರೆಸಿಕೊಂಡೆ ನೀಡದೆ

ಸೂಚ್ಯವಲ್ಲ ನನ್ನ ಹಾಡು
ಸುತ್ತಿ ಬಳಸಿ ಬಿಡಲುಬಹುದು
ಹೇಳಬಯಸಿದಂಥ ಮಾತು
ಭಾವತೀತವಾದೀತು
ಹೆಚ್ಚಿಗೇನೂ ಬಯಸಲೊಲ್ಲ
ಮನದ ಅಂತರಂಗದಲ್ಲಿ
ಹೆಚ್ಚು ಎಂಬಂತೆ ಹೆಜ್ಜೆ ಗುರುತ
ಬಿಟ್ಟರಾಯಿತು

ಗರಡಿಯಲ್ಲಿ ಪಳಗಲಿಲ್ಲ
ಜರಡಿ ಎಂದೂ ಹಿಡಿಯಲಿಲ್ಲ
ಕುರುಡು ಪ್ರೇಮ ಮಾತ್ರವಷ್ಟೇ
ನನ್ನ ಗುರುತು ಚೀಟಿಯು
ಯಾವ ಅದ್ಭುತಕ್ಕೆ ಹೋಲಿಸೋಕೆ
ಹೋದರಲ್ಲಿ ಸೋಲು
ಅಂಥ ವಿಸ್ಮಯ ಉಂಟು ಮಾಡಿತೆಮ್ಮ
ಬೇಟಿಯು

ತಾರಕಕೆ ನಿನ್ನ ಹಸಿವು
ಕಣ್ಣ ಮಿಂಚ ಮೇಲೆ ಒಲವು
ನಾನು ಅದರ ಪರಮ ವೈರಿ
ಹಿಂದೆ ಮೊದಲಿನಿಂದಲೂ
ಹೂವಿನೊಡನೆ ನಿತ್ಯ ಸಮರ
ನಿನ್ನ ಹೊಗಳಿ ಬರೆದುದಕ್ಕೆ
ನನ್ನ ಕಂಡು ಮುದುಡುತಾವೆ
ಮುನಿಸಿಕೊಂಡು ಈಗಲೂ

ಎದುರು ಬಿದ್ದರವರಿಗೆಲ್ಲ
ತರ್ಕ ನೀಡಲಾಗುತಿಲ್ಲ
ನಿನಗೆ ಸೋತ ಪರಿಯ ನಾನು
ಹೇಗೆ ತಾನೆ ಬಿಡಿಸಲಿ
ಎದುರು ಕಂಡದಕ್ಕೂ ಹೆಚ್ಚು
ಬೆವರುತೇನೆ ನಿನ್ನ ಎದುರು
ನಮ್ಮ ಗುಪ್ತ ಬೇಟಿ ಜಾಗ
ನಿಕುಂಜಮಾನ ಕನಸಲಿ

                    -- ರತ್ನಸುತ

ದೇವರು ನಗುತ್ತಿದ್ದಾನೆ

ಬೆಳ್ಳಂಬೆಳಗ್ಗೆ ಬೆಳಕು ಮೂಡುವ ಮುನ್ನ
ಅಪರೂಪದ ಸ್ನಾನ ಮುಗಿಸಿ
ಮೈಲಿ ಉದ್ದದ ಸಾಲಲಿ ನಿಂತದ್ದು
ಎಲ್ಲೋ ಪಟಗಳಲ್ಲಿ ಕಂಡ ದೇವರ
ಸಾಕ್ಷಾತ್ಕರಿಸಿಕೊಳ್ಳಲಿಕ್ಕೆ

ನೆರೆದಿದ್ದವರಲ್ಲಿ ಭಕ್ತಿಯೂ, ಭಯವೂ,
ಭಾವವೂ, ಬಾದೆಗಳ ಮುಡಿಕಟ್ಟು;
ದನಿ ಹೊರಡದ ತುಟಿಗಳಿಂದ
ಬಾರದ ಮಂತ್ರಗಳ ಪಟನೆ

ಎಲ್ಲೋ ಹಸಿದ ಹಸುಳೆಯ ಅಳಲು,
ಜಂಗುಳಿಯ ನಡುವೆಯೂ ಹಾಲುಣಿಸಲು
ಮುಂದಾದ ನಿಷ್ಠಾವಂತ ತಾಯಿ;
ಬೆಳಗಿನ ಕರ್ಮವ ತಪ್ಪಿಸಿದವರಿಂದ
ಸಹಿಸಲಾಗದಷ್ಟು ದುರ್ನಾತ ಪ್ರಾಪ್ತಿ,
ಮುಂದೆ ಸಾಗದ ಸಾಲು

ಅಲ್ಲಲ್ಲಿ ಜೋರು ಜೈಕಾರಗಳ ಸದ್ದು
"ತಿಂಡಿ ಮಾಡಿ ಬಂದಿರಬಹುದು ಬಹುಶಃ!!"
ಅನಿಸುವಷ್ಟರ ಮಟ್ಟಿನ ಉತ್ಸಾಹ;
ಹಣ್ಣು ಮುದುಕರ ಸುಸ್ತು,
ಬಿಸಿ ರಕುತ ಯುವಕರ ಅಸಹನೆ,
ನವ ದಂಪತಿಗಳ ಬೆರಗು!!

ನಾನಾ ಭಾಷಿಗರ ನಡುವೆ
ನಮ್ಮವರಾರಾದರೂ ಸಿಗಬಹುದುದೆಂಬ ಭ್ರಮೆ
ಭ್ರಮೆ, ಕೊನೆಗೂ ಭ್ರಮೆಯೇ!!
ಚೂರು ಜರುಗಿತು ಉದ್ದ ಸಾಲು,
ಮತ್ತೆ ಜೋರು ಜೈಕಾರ!!

ಲಾಡು ಪ್ರಸಾದಕ್ಕೆ ನೂಕು ನುಗ್ಗಲು
ಸಿಕ್ಕೇ ಸಿಗುತ್ತದೆಂದು ತಿಳಿದಿದ್ದರೂ ಸಹಿತ;
ಮಾರು ದೂರದಲ್ಲಿ ನಗುತ್ತಿದ್ದ ದೈತ್ಯ ಮೂರ್ತಿ
ಭಕ್ತರಿಂದ ಬೇಡಿಕೆಗಳ ಅರ್ಪಣೆ !!

ಫಕೀರನಾಗಿದ್ದವನಲ್ಲಿ ಅಮೀರನು
ಗೋಪುರ, ಸ್ತಂಭ, ಚೌಕಟ್ಟು
ಆರತಿ ತಟ್ಟೆ, ಹೂಬುಟ್ಟಿ ಸೇರಿ
ಆಸನವೂ ಚಿನ್ನದ್ದು;
ದೇವರು ನಮ್ಮನ್ನ ನೋಡಿ ನಗುತ್ತಿದ್ದಾನೆ
ವ್ಯಂಗ್ಯವಾಗಿ!!
ಅಲ್ಪ  ಕಣ್ಗಳಿಗದು 
ಹಿಂದೆಂದೂ ಕಾಣದ ತೇಜಸ್ಸು!!

ಗುಡಿಯ ಒಳಗೂ, ಹೊರಗೂ
ಭಿಕ್ಷುಕರ ದಂಡು
ನಾನೂ ಒಬ್ಬ ಅವರಲ್ಲಿ;
ದೇವರಿನ್ನೂ ನಗುತ್ತಿದ್ದಾನೆ
ಕಾರಣ ಕೇಳುವರೆಂದು ಕಲ್ಲಾಗಿ ಉಳಿದು
ಹೌದು ಅದು ವ್ಯಂಗ್ಯ ನಗು...

                              -- ರತ್ನಸುತ

Thursday, 27 March 2014

ವಿನಾಕಾರಣ ಪ್ರೇಮಿಸುವಾಗ

ಕನ್ನಡಿಗಂಟಿದ ನಿನ್ನ ಕಣ್ಗಳ
ಸೆಳೆವುದಾದರೂ ಎಂದಿಗೆ?
ಅರಿತುಕೊಳ್ಳುವ ಸೌಜನ್ಯವೇ
ಇಲ್ಲವಾಯಿತೇ ಕಣ್ಣಿಗೆ?
ಮಿಂಚು ಹೊಂಚಿದೆ ಕೊಂಚ ಕೊಂಚವೇ
ನನ್ನ ಉರಿಸುವ ಸಲುವಿಗೆ
ಸತ್ತು ಹೋದೆನು ನಿನ್ನ ಕಾಣುತ
ಈಗ ಬೇಡುವೆ ಬದುಕಿಗೆ

ಎತ್ತ ಕಾಣಲಿ ಸುತ್ತ ಮುತ್ತಲೂ
ಮತ್ತು ಏರಿವ ಸೂಚನೆ
ಮೈಯ್ಯ ಮೇಲಿನ ಪ್ರಜ್ಞೆ ಸ್ಥಿರತೆಯ
ಕಳುದುಕೊಳ್ಳಲೇ ಸುಮ್ಮನೆ?
ಖಾಲಿ ಆಸೆಗೆ ನಿನ್ನ ಮನಸನು
ಗೆಲ್ಲಲಾಗದು ತಿಳಿದಿದೆ
ಪೋಲಿತನವನು ಬಿಟ್ಟು ಬರೆದರೆ
ಪದಗಳೇ ಸಿಗದಾಗಿದೆ

ಹೇಳಿ ಕಳಿಸುವೆ ಗಾಳಿ ಕೈಯ್ಯಲಿ
ಹೇಳಲಾಗದ ಸಂಗತಿ
ಕೇಳಬೇಕು ನೀ ನಡುವೆ ವಹಿಸಿದ
ಮೌನ ನೀಡುವ ಮಾಹಿತಿ
ನಾಚಿಕೊಳ್ಳುತ ನುಂಗಿಕೊಂಡೆನು
ಮೂರೇ ಮೂರು ಪದಗಳ 
ನಾನು ಕೇವಲ ಬಣ್ಣವಷ್ಟೇ
ನಿನ್ನ ಚಿತ್ರಣ ಅಸದಳ 

ರೋಮಗಳಿಗೆ ಪ್ರೇಮ ಪಾಠವ
ಹೇಳಿಕೊಂಡೆನು ಬಿಡುವಲಿ
ದಿನಕ್ಕೊಂದಂತೆ ಇಟ್ಟು ಕರೆವೆ 
ಅಂದಕೊಪ್ಪುವ ಹೆಸರಲಿ
ಎಲ್ಲಿ ಕನ್ನಡಿ? ಕರಗಿ ಹೋಯಿತು!!
ನಿನ್ನ ರೂಪವ ಬಿಂಬಿಸಿ
ದುಂಬಿ ಕೆರಳಿತು ಮಧುವ ಹೀರಿ
ನೀನು ಸೋಕಿದ ಹೂವಲಿ

ಹಣೆಯ ಮೇಲ್ಗಡೆ ಬೈತಲೆಯನು
ಮೊನ್ನೆ ಕನಸಲಿ ಕಂಡೆನು
ಸ್ವರ್ಗ ದಾರಿಯೂ ಅಂತೆ ಕಂಡು
ತೀರ ಗೊಂದಲಗೊಂಡೆನು
ಹೀಗೆ ಇನ್ನು ಅದೆಷ್ಟೋ ಗೊಂದಲ
ಕೂತು ಬಗೆಹರಿಸೋಣವೇ?
ಕಾಲ ಮುಳ್ಳಿನ ಪಾಲಿಗೆ
ಕಾಯೋ ಸಜೆ ವಿಧಿಸೋಣವೇ?

                           -- ರತ್ನಸುತ

Wednesday, 26 March 2014

ಚೊಚ್ಚಲ ರಾತ್ರಿ

ಚೊಚ್ಚಲ ರಾತ್ರಿ
ಬಾರದ ನಿದ್ದೆ
ಹಾಸಿಗೆ ಚಾದರ
ಚೆದುರಿತ್ತು
ಮೀಸೆ ಚಿಗುರು
ವಯಸ್ಸದಿನಾರು
ನೂತನ ಭಾಷೆಯ
ಕಲಿತಿತ್ತು

ಶಾಂತಿಯ ನಡುವೆ
ವ್ಯವಹರಿಸುವದು
ನರಗಳ ಸಂತೆ
ಜರುಗಿತ್ತು
ನೂಕು ನುಗ್ಗಲ
ತಡೆದಿಡುವಲ್ಲಿ
ಇದ್ದ ತ್ರಾಣ
ಸಾಕಾಯ್ತು

ಇದುವರೆಗೆ 
ಅದಾವುದೂ ಅಲ್ಲದ
ಕೇವಲ ಅದುವೇ
ಅದುವಾಯ್ತು
ಎದೆ ಬಡಿತಗಳು
ಬಿರುಸಾಗಿ
ಹಿಡಿ ಮುಷ್ಟಿಯಲಿ
ಬಿಸಿ ಹೆಚ್ಚಾಯ್ತು

ಚಾಚಿದ ಮೈಯ್ಯನು
ಬಾಚುವ ಹಂಬಲ
ಹಿಂದೆಯೇ ಚೂರು
ಭಯವಿತ್ತು
ಮುಲುಗಾಟವನು
ಕೇಳಿದ ಅಣ್ಣನು // ಅಪ್ಪ
ಎಚ್ಚರಿಕೆ
ಕೊಟ್ಟಾಗಿತ್ತು 

ಆ ಮೊದಲು
ಹಸ್ತಕೆ ಆ ಪರಿಯ
ಅದ್ಭುತ ಆಟಿಕೆ
ಸಿಕ್ಕಿರಲಿಲ್ಲ
ಪಠ್ಯ ಪುಸ್ತಕ
ಆ ತನಕ
ಪ್ರಕೃತಿಗೆ ಆ
ಹೆಸರಿಟ್ಟಿಲ್ಲ

ಅಂದಾಜಿನ 
ಅರಿವಿಲ್ಲದೆ ಆಡಿದೆ
ಹೊಸ ಆಟದಿ
ಹೊಸ ಹುರುಪಿತ್ತು
ಮುಂದೆ ಆದದ್ದೆಲ್ಲವೂ
ಹೊಲಸು
ಅದುವೇ ಅಂತಿಮ
ಅರಿವಾಯ್ತು

ಎಂಥ ಪಜೀತಿ!!
ಹಾಗಾಗಿ
ಎರಡು ತಾಸು ನಿದ್ದೆ
ಬರದಾಗಿ
ತಡಮಾಡಿ ಎದ್ದೆ
ಮಾರಾನೆ ದಿವಸ
ಅರಳಿತ್ತು ತುಟಿಯು 
ತಿಳಿಯಾಗಿ !!

           -- ರತ್ನಸುತ

ಅವಾಂತರ !!

ಗೆಳತಿಯ ಬಚ್ಚಲ ಕೋಣೆಯ ಗೂಟದಲಿ
ಎಂಥೆಂಥದೋ ಉಡುಪುಗಳ ನಡುವೆ
ನನ್ನ ಒಳ ಉಡುಪು 
ಕಾಣದಂತೆ ಅಡಗಿ ಕೂತಿದೆ?!!

ಜೋಪಾನವಾಗಿ ಒಂದೊಂದನ್ನೂ
ಸರಿಸಿ, ಬಿಡಿಸಿ, ಇಳಿಸಿ
ಉಸಿರುಗಟ್ಟಿದ ಆ ಹೆಣವ
ಪತ್ತೆ ಹಚ್ಚಲು ಹೆಣಗಾಡಬೇಕು

ಮತ್ತೂ ಸಿಗದಿದ್ದರೆ
ಒಂದರ ಒಳಗೆ ಮತ್ತೊಂದ
ತಡಕಾಡಬೇಕು;
ಎಲಾಸ್ಟಿಕ್ ಜಗ್ಗದಂತೆ,
ಕೊಕ್ಕು ಮುರಿಯದಂತೆ,
ಉಬ್ಬು ಹಿಗ್ಗದಂತೆ, ತಗ್ಗದಂತೆ!!

ಸಿಗದಿದ್ದರೂ ಪ್ರಳಯವೆಂಬಂತಲ್ಲ;
ಹುಡುಕಾಟದಲ್ಲಿ ಒಂದು ಸುಖವಿದೆ ಅಷ್ಟೆ!!
ಅದೊಂದು ರೀತಿ
ತುಂಬಿದ ಬಸ್ಸಿನ ನೂಕಾಟದಲ್ಲಿ
ಹುಡುಗಿಯರ ಬೆನ್ನಿಗೆ ಆನಿಕೊಂಡಾಗ
ಪಡುವ ಕಷ್ಟದೊಳಗಿನ ಖುಷಿಯಂತೆ!!

ಬೆವರ ವಾಸನೆಗೆ ಆಕೆ ಪಳಗಿದ್ದಾಳೆ;
ಇಲ್ಲೋ; ಒಂದೇ ಸೆಕೆ!!
ಅಪ್ಪಿ-ತಪ್ಪಿ ನನ್ನ ತುಂಟತನ ಆಕೆಗೆ ಗೊತ್ತಾದರೆ
ಮತ್ತೊಮ್ಮೆ ಸಮಜಾಯಿಷಿಕೊಳ್ಳಬೇಕು !!

ಮತ್ತೆ ನೇತು ಹಾಕುತ್ತೇನೆ
ಎಲ್ಲವನ್ನೂ ಮೊದಲಿನಂತೆ ಆ ಗೂಟಕ್ಕೆ
ಮೊದಲಾವುದು? ಮತ್ತೆ....? ಮತ್ತೆ....?
ಗುರುತಿಟ್ಟುಕೊಳ್ಳಬೇಕಿತ್ತು!!
ಎಲ್ಲಿ; ಮೈ ಮರೆತಿದ್ದೆನಲ್ಲ....!!
ಗಾಬರಿಯಲ್ಲಿ ಎಳೆದುಕೊಂಡ ವಸ್ತ್ರದ ಕೊಕ್ಕು
ಇಲ್ಲೇ ಎಲ್ಲೋ ಬಿದ್ದಂತಾಯಿತು
ಕನ್ನಡಕ ಧರಿಸಿಲ್ಲ, ಹೇಗೆ ಹುಡುಕುವುದು??

ಅಲ್ಲಿಗೆ ಬಾಗಿಲು ದಡ, ದಡ ಬಡಿದಳು
ಹಿಂದೆ ಬಹಳಷ್ಟು ಬಾರಿ ಸಿಕ್ಕಿಬುದ್ದಿದ್ದೇನೆ
ಇಂದು ಮತ್ತೊಂದು ಸೇರ್ಪಡೆ;
ಅಷ್ಟರಲ್ಲೆ ಕಿಟಕಿಯ ಆಚೆ 
ಒಣಗಲು ಹಾಕಿದ್ದ ಸಾಹೇಬ್ರು
ಮೈ ಮುರಿದು
"ನಾನಿಲ್ಲಿದ್ದೀನ್ಲಾ" ಎಂದು ನಕ್ಕಂತಾಯ್ತು!!

                                       -- ರತ್ನಸುತ

ಒಮ್ಮೆ ಕೇಳಿಸಿಕೋ !!

ಬೆನ್ನೀರ ಮಜ್ಜನದಿ
ಒದ್ದೆಗೂದಲ ಹರಡಿ
ಹಿಡಿ ಹಿಡಿಯ ಎದೆಗಿಟ್ಟು
ಮೆದುವಾಗಿ ಒರೆಸುವಲಿ
ಕೂದಲಂಚಿಗೆ ಕದ್ದು
ಜಾರುವ ಹನಿಗಳ 
ಎಂದಾದರೂ ಕೇಳು
ನನ್ನ ಕುರಿತು

ಬಿಟ್ಟು ಬಂದ ದಾರಿ
ನೂರು ಹೆಜ್ಜೆಯನಿಟ್ಟು
ಕಟ್ಟಿದ ಕಾಲ್ಗೆಜ್ಜೆ
ಮಾತಿಗೆ ಕಿವಿಗೊಟ್ಟು
ನೆರಳನ್ನು ಸವರುತ್ತ
ಮುದ್ದಿಸಿ ಕೇಳು
ಸಿಗಬಹುದು ನಿನಗಲ್ಲಿ
ನನ್ನ ಗುರುತು

ಮುಡಿಯಲ್ಲಿ ಮೆರೆದಾಡಿ
ಮರುಗಾಲ ಮಡಿದಂಥ
ಶಾಪಗ್ರಸ್ತ ಹೂವು
ತರ್ಕಕ್ಕೆ ನಿಂತಿದೆ
ಹುಸಿಯಾಗಿ ಆಲಿಸು
ಅದರ ಮಾತನ್ನ
ಬಾಡದೆ ಸಾಯುವುದು
ಹಾಗಾಗದ ಹೊರತು

ಇನ್ನೆಷ್ಟು ಬಾರಿ 
ಹೆಬ್ಬೆರಳ ಗೀರಿ
ನನ್ನೆದೆಯ ಮಣ್ಣನು
ಕೆದಕಿ ಹಾಕುವುದು
ಹೆಬ್ಬೆರಳ ದಿಟ್ಟತನ
ಹೃದಯಕ್ಕೆ ತುಂಬಿಸು
ನನ್ನೆಸರ ಪಿಸುಗುಡಲಿ
ಆಗಾಗ ಮರೆತು 

ಇದ್ದಷ್ಟೂ ಏಕಾಂತ
ಇನ್ನಷ್ಟು ಜೊತೆಗೂಡಿ
ಮತ್ತಷ್ಟು ನೆರವಾಗು
ಗೊಂದಲದ ಮನಕೆ
ಬೇರೇನೂ ವಹಿಸದೆ
ಚಿಂತೆಗೀಡು ಮಾಡು
ಕಿಂಚಿಷ್ಟು ಯೋಚಿಸಲಿ
ಮತ್ತೂ ಕುಳಿತು

ಕಡಿವಾಣದಲಿ ಚೂರು
ಸಲುಗೆ ಕೊಟ್ಟು ನೋಡು
ಮಾತುಗಳೇ ಎಲ್ಲವನು
ಹೇಳುವಂತದ್ದಲ್ಲ
ಕೆಲವು ಸಲ
ಮೂಖರಾಗುವುದೇ ಚಂದ
ಮುರಿವ ಹಾಡಿಗಿಂತ
ಮೌನವೇ ಒಳಿತು

                   -- ರತ್ನಸುತ

Tuesday, 25 March 2014

ಗುಂಡು ತೋಪಿನಾಚೆ !!

ಗುಂಡು ತೋಪಿನ ಗುಟ್ಟುಗಳು
ಆಗಾಗ ತೆರೆದುಕೊಳ್ಳುತ್ತವೆ
ಏಕಾಂತದಲ್ಲಿ!!

ಒತ್ತಿಟ್ಟರೂ ಚಿಮ್ಮುವ 
ಕಿತ್ತಿಟ್ಟರೂ ಹೊಮ್ಮುವ
ಕಾಮನೆಗಳ
ಪುಸ್ತಕದ ಕೊನೆ ಪುಟದಲ್ಲಿ
ಗೀಚಿಬಿಟ್ಟರೂ
ಅಂಗಾತ ತೆರೆದಾಗ 
ಕಣ್ಮುಂದೆ ಬರುತಾವೆ!!

ಹರಿದು ಬಿಸಾಡುವಂತಿಲ್ಲ
ನಾಳೆಗಳಿಗೆ ಬೇಸರವಾಗಬಹುದು;
ಮಡಿಸಿ ಇಡುವಂತಿಲ್ಲ
ಸುಕ್ಕುಗಟ್ಟಿ ಹಾಳಾಗಬಹುದು!!

ಎಂದಾದರೂ ಆ ತೋಪಿನ 
ಹೆಮ್ಮರದ ಬುಡದಲ್ಲಿ
ಹೂತು ಬಿಡಬೇಕು
ಹಸ್ತ ಮೈಥುನವಾಗಿ
ಮಂಕು ಬಳಿದಂತೆ;
ಅಲ್ಲಿ ಹೊಸ ನೆನಪುಗಳು
ಚಿಗುರೊಡೆಯಬೇಕು
ವೀರ್ಯಾಣುಗಳಂತೆ
ಲೆಕ್ಕ ಮೀರುವ ಸಂಖ್ಯೆಯಲ್ಲಿ !!

ಹಿಂದೆ ತಿರುಗಿದರೆ
ಕಾಣಸಿಗುವುದು ಹೆಮ್ಮರವಷ್ಟೇ;
ಅದರಾಚೆ ಖಾಲಿ ಬಯಲು.

ಕಣ್ಮುಂದೆ ಇನ್ನು ಎಷ್ಟೋ 
ಮರದ ಬುಡ ಮಡಿಲುಗಳು
ಕೈ ಚಾಚಿ ಕರೆದಿವೆ
ಹೊಸ ಅನುಭೂತಿಗೆ!!

ಒಂದೊಂದನ್ನೂ ಪರಗಣಿಸುತ್ತಾ ಹೋದರೆ
ಯೌವ್ವನ ತೋಪಿನಲ್ಲೇ ಕಳೆಯ ಬೇಕು!!

ಕೊಠಡಿಯ ಪಲ್ಲಗ
ಇದೇ ತೋಪಿನ 
ಬೇವಿನ ಮರದ್ದು;
ಕನಸುಗಳಾವತ್ತೂ ಕಹಿಯಾಗಿಲ್ಲ
ಉಪ್ಪು, ಖಾರ, ಹುಳಿ,
ಸಿಹಿ, ಸಪ್ಪೆ ಎಲ್ಲವನ್ನೂ ಬಡಿಸಿತು!!

ನಿದ್ದೆ ಬರಿಸುತ್ತಿದೆ ಕಣ್ಣು
ದಿಂಬು ಮಲಗಬಿಟ್ಟರೆ ತಾನೆ...!!

                              -- ರತ್ನಸುತ

ಹಬ್ಬದಿರುಳು

ಬಾಗಿಲಲ್ಲೆ ಕಾದಿರುತ್ತಾಳೆ 
ಎಷ್ಟೇ ಬಾರಿ ತಿಳಿ ಹೇಳಿದರೂನು
ಅತ್ತ ಮನೆಯ ಬೆಳಕ ಹೀರಿ
ಇತ್ತ ಹಜಾರಕ್ಕೆಲ್ಲ ನೆರಳ ಪೂಸುತ್ತ
ದೀಪಕ್ಕೆ ಸರಿಯಾಗಿ ಬಳುಕುತ್ತಾಳೆ;
ಬೀದಿ ನಾಯಿಗಳು ಊಳಿಕ್ಕುತ್ತವೆ
ಗುಡಾಣದ ಬೆಕ್ಕು ಕಣ್ಮುಚ್ಚಿಕೊಳ್ಳುತ್ತದೆ
ಆಕೆಯ ಭಯದಲ್ಲಿ ಭಾಗಿಯಾಗಿ!!

ಹೊಟ್ಟೆಯಲ್ಲಿ ಸಣ್ಣ ಸಂಕಟ,
ಅದು ಹಸಿವನ್ನೂ ಮೀರಿಸುವಂತದ್ದು
ಬೆರಳುಗಳು ಏನನ್ನೋ ಯೋಚಿಸುತ್ತಿವೆ
ಚಿತ್ತಕ್ಕೆ ತದ್ವಿರುರುದ್ಧವಾಗಿ;
ಕಣ್ಣಲ್ಲಿ ಜಾರದೆ ಉಳಿದ ಕಂಬನಿಯ ಕಟ್ಟು
ಗುಳಿಯ ಸುತ್ತಲೂ ಗೆರೆಗಳ ಸಿಟ್ಟು
ಒಂದು ಆಲೆಯ ಜುಮುಕಿ ಕಳುವಾಗಿದೆ,
ಮತ್ತೊಂದು ಇದ್ದಲ್ಲೇ ಕೊಲೆಯಾಗಿದೆ!!

ಅಧರಗಳ ಸುತ್ತ ಉಷ್ಣ ಬೊಬ್ಬೆಗಳು;
ಆಗಾಗ ಮೂಖ ನಾಲಗೆಯ
ಸಾಂತ್ವನದ ತಿಳಿ ಲೇಪ.
ಅರಳಲು ಬೊಬ್ಬೆಗಳು ಸಿಡಿಯುವ ಆತಂಕ!!
ಕೆನ್ನೆ ಮೇಲೆಲ್ಲ ನಾ ಬರೆದು ಬಿಟ್ಟ
ಅಪೂರ್ಣ ನೀಳ್ಗವಿತೆಗಳು
ಕನ್ನಡಿ ಓದುವುದು ದೂರದ ಮಾತು
ಬರೆದವನೇ ಬರಬೇಕು ಅರ್ಥವಾಗಲಿಕ್ಕೆ!!

ರಸ್ತೆಯ ಬೆಳಕ ಕಂಡರೆ
ಸೆರಗನ್ನ ಸರಿಪಡಿಸಿಕೊಳ್ಳುತ್ತಾಳೆ
ತೂಕಡಿಕೆಯಲ್ಲೂ ಎಚ್ಚರವಾಗಿರುತ್ತಾಳೆ
ಎಡಗೈಯ್ಯಲಿ ಲಟ್ಟಣಿಗೆ ಮರೆಸಿ;
ಬಲಗೈ ಸೋಕಿದರೂ ತಾ ಕೆರಳುವುದು 
ಹೊರಗೈ ಸೋಕಿದರೆ?!!
ಸದ್ದು ಮಾಡದೆ ಶೀಲಕ್ಕೆ ಕಾವಲಿದ್ದಾಳೆ
ನನ್ನ ಬರುವಿಕೆಗೆಂದೇ ಕಾದು!!

ಅದು ನಾ ಕೊಡಿಸಿದ್ದ ಸೀರೆ!!
ದಿನದ ಒಂದು ಹೊತ್ತು ಊಟ ಬಿಟ್ಟು;
ಹೀಗೆ ಒಂದು ವರ್ಷ ಕಳೆದು
ಕೂಡಿಸಿಟ್ಟ ಹಣದಲ್ಲಿ ತಂದದ್ದು.
ಆಕೆ ಅದನ್ನೇ ಉಟ್ಟಿದ್ದಾಳೆ
ದೂರದ ತಿರುವಿನಲ್ಲಿ ಕಾಣುತ್ತಿದೆ.
ಇಂದು ಹಸಿವು ನೀಗಿಸಿಕೊಳ್ಳಬೇಕು
ಆ ಪಾಪಿ ಸೀರೆಯ ಕಳಚಿ!!

ನನ್ನೊಳಗಿನ ಹುಲಿ ಎಚ್ಚರವಾಗಿ
ಶರಣಾದ ಜಿಂಕೆಯಂಥ ಆಕೆಯ ಕೈ ಹಿಡಿದೆ!!
ಆಕೆಯೂ ಹಸಿದಿದ್ದಳು,
"ನನ್ನನ್ನು ತಿಂದಿಯಾಳೆ?" ತಿನ್ನಲಿ!!

ಉಷ್ಣತೆಗೆ ತಂಪೆರೆದೆ;
ಬೊಬ್ಬೆಗಳು ಒಂದೊಂದೇ ಮಾಯವಾದವು
ನಾನು ಗಂಡು, ಆಕೆ ಹೆಣ್ಣು
ಇನ್ನೇತಕ್ಕೆ ಬೇಕು ಬೇರೆ ಶಾಸ್ತ್ರ?
ಗೊತ್ತಿಲ್ಲದ ಆಟಕ್ಕೆ ಇಬ್ಬರೂ ಸಜ್ಜಾದೆವು
ಪಕ್ವ ನಿಲುವಿನಲ್ಲಿ
ಆ ಇಡೀ ರಾತ್ರಿಯ ನಿದ್ದೆಯನ್ನ
ನಾವು ಕದ್ದೆವು, ಹಬ್ಬವಾಚರಿಸಿ!!

                                         -- ರತ್ನಸುತ

Sunday, 23 March 2014

ಮೊದಮೊದಲು

ಅಂಗಿಯ ತೋಳಿಗೆ ನೀರನು ಚಿಮುಕಿಸಿ
ಇಸ್ತ್ರಿಯ ತಳ ಬಿಸಿ ದಾಹವ ತೀರಿಸಿ
ಜೋಡಿ ಶರಾಯಿಗೆ ತುಸು ಬಿಸಿ ಮುಟ್ಟಿಸಿ
ಚೈನ ಸೆಂಟನು ಪೂಸಿದೆನು

ಎಡಗೈ ಕ್ರಾಪಿಗೆ ಬಲಗೈ ಅಣಿಕೆಗೆ
ಕನ್ನಡಿ ಮುಂದಿನ ಸಪ್ಪೆ ಮೂತಿಗೆ
ಲೇಪಿಸಿ ಕ್ರೀಮು, ಪೌಡರ್ ತಾಕಿಸಿ
ಮೀಸೆಯ ಅಂಚನು ತಿರುವಿದೆನು

ಪಾಲಿಶ್ ಬಳಿದ ಕರಿ ಬೂಟು
ನಾರದ ಹೊಚ್ಚ ಹೊಸ ಸಾಕ್ಸು
ಕರಾರುವಾಕ್ಕು ಗಡಿಯಾರ
ಕೊಂಡೆ ಮೊನ್ನೆ ಬುಧವಾರ 

ಒತ್ತಾಯಕೆ ಕುಂಕುಮವಿಟ್ಟು
ಹೊಸಲಿನಾಚೆ ಅಳಿಸಿ ಬಿಟ್ಟು
ಉಸಿರಿನ ಜೊತೆ ಹೊಟ್ಟೆ ಎಳೆದು
ಬಿಗಿದ ಬೆಳ್ಟಿಗೆ ಉಪಕಾರ

ನಡುಕದಲೇ ತಯಾರಿಯ ಮಾಡಿ
ಏದುಸಿರ ಅದಾಗಿಯೇ ಬಿಟ್ಟು
ಲಬ್ ಡಬ್ ಎದ್ದ ಎದೆ ಬಡಿತವನು
ಗಣನೆಗೆ ಕೊಳ್ಳದೆ ಬೆವರಿದೆನು
..... 

ಎರಡು ಬಗೆಯ ಸಿಹಿ ತಿನಿಸು,
ಬಾಂಬೆ ಚೌ ಚೌ, ಮಸಾಲೆ ಗೋಡಂಬಿ
ಲೋಟ ನೀರು ಎದುರಿತ್ತು
ತಿನ್ನುವ ಆಸೆ ಹೆಚ್ಚಿತ್ತು!!

ನಾಲ್ಕು ಮಾತು ಒಂದು ಬಾಯಿ
ರಾಡಿಯಾಗಿಸಿಕೊಳ್ಳದೆ ಕೈಯ್ಯಿ
ತಗ್ಗಿದ ತಲೆಯ ಮೆಲ್ಲನೆ ಎತ್ತಿ
ನೋವಿದ್ದಂತೆ ಮೆಲ್ಲಗೆ ಸುತ್ತಿ;
ಕಾಪಿ ಲೋಟವ ತಂದಳು ಹುಡುಗಿ
ಆಗಲೇ ನಾನು ಹೋದೆನು ನಡುಗಿ!!

ಹುಡುಗಿಯ ಅಪ್ಪನ ಉದ್ಧಟ ಪ್ರಶ್ನೆ
ಉತ್ತರ ನೀಡಲು ಮತ್ತೊಂದು;
ಅವಳಮ್ಮ ಬಲು ಮೆದುವೆಂಬಂತೆ
ಕರ್ಟನ್ ಹಿಂದೆ ಉಳ್ಕೊಂಡು!!

ಆಕೆಗೇನು ಕುಂದು ಕೊರತೆ?
ತೀಡಿದ ಗೊಂಬೆಯೇ ಇರಬೇಕು!!
ನನ್ನ ಒಪ್ಪಿಗೆ ಆಗಲೇ ನೀಡಿದೆ
ಆಕೆ ಒಪ್ಪಿದರೆ ಸಾಕು!!
.....

ಮಾರನೆಯ ದಿನ ಸುದ್ದಿ ಮುಟ್ಟಿತು
ಹುಡುಗಿ ಒಪ್ಪಿರಲಿಲ್ಲೆಂದು;
ಅಮ್ಮಳ ಸಿಟ್ಟು ಅಡುಗೆ ಮನೆಯಲಿ
ಅಪ್ಪನಿಗನಿಸದೆ ಏನೊಂದೂ!!

ವಾರದ ಕನಸನು ಕಬಳಿಸಿಕೊಂಡಳು
ಅವಳೇ ಆವರಿಸಿಕೊಂಡು
ಮರುವಿನ ನೆರವನು ಪಡೆದೆನು ಅಲ್ಲಿ
ಅವಸರ ಬೆನ್ನ ಸವರಿಕೊಂಡು!!

                                   --ರತ್ನಸುತ 

ನೆರಳು

ಇದ್ದಲಿನ ಕಾರ್ಖಾನೆಯಲ್ಲಿ
ಬಣ್ಣ ಬಣ್ಣದ ಕನಸುಗಳು!!

ಜಾರಿದ ಕಂಬನಿ ಕಪ್ಪು,
ತೋಯ್ದ ಗಲ್ಲ ಕಪ್ಪು,
ಒರೆಸಿಕೊಂಡ ಅಂಗೈ ಕಪ್ಪು;
ಶುಚಿಗೊಳ್ಳುತಿರಬಹುದು ಬಹುಶಃ
ಕಣ್ಗಳು ನಾಳೆಗಳ ಗುರುತಿಗೆ!!

ಕನಸು ನಿಜವಾಗಬಹುದೆಂಬ
ಕನಸುಗಳು ಈನಡುವೆ 
ಇಮ್ಮಡಿಗೊಳ್ಳುತ್ತಿವೆ;
ತಡೆಯುವುದಂತೂ ದೂರದ ಮಾತು!!

ನನ್ನ ಜೊತೆಗಾರರೆಲ್ಲರೂ ಕೃಷ್ಣರು
ಬಣ್ಣ್ದ ಹಿಂದಿನ ತೊಗಲಿಗೆ 
ಇನ್ನೂ ಈ ಲೋಕದ ಕರಾಳ ಮುಖ
ಅಪರಿಚಿತ ಎಂಬುದು ನಿರಾಳದ ಸಂಗತಿ 

ನೀರೆರಚಿಕೊಂಡರೆ ಒಂದು ದಿನ
ದಿನಾಲೂ ಬಯಸುವುದು ಕನ್ನಡಿ
ಅಂತೆಯೇ ಬಿಂಬಿಸಲು;
ಆದ್ದರಿಂದಲೇ ನಾವು ನೀರಿನಿಂದ
ಅದರ ಬಿಂಬದಿಂದಲೂ ದೂರ!!

ನಾವು ಅಸಹಾಯಕರು
ನಮ್ಮ ಮೈ ಮೇಲಿನ ಧೂಳನ್ನ ಒದರಿಕೊಂಡರೆ
ನಮಗಷ್ಟೇ ಅಲ್ಲ
ಸುತ್ತಲಿನವರಿಗೂ ಘಾಸಿ;
ನಮ್ಮ ಅಳುವಿನಿಂದ ಯಃಕಶ್ಚಿತ್
ಒಂದೂ ಉಪಕಾರವಿಲ್ಲ ಯಾರಿಗೂ!!

ಬಣ್ಣಗಳು ಕಾಣುತಿವೆ
ಭೇದವಾಗಿ ಉಳಿದು.
ಕಣ್ಗುಡ್ಡೆ ನನ್ನ ಜಾತಿ
ಸುತ್ತಲ ಬಿಳಿ ನನ್ನದಲ್ಲ್ಲ!!

ಅತ್ತು ಇನ್ನಷ್ಟು ಸಾರಿಸಿದರೂ
ಕೆಂಪು ತುಟಿಗಳಂತೂ ಚುಂಬಿಸುವುದಿಲ್ಲ
ಅವೂ ಕಪ್ಪೇ!! ಸರಿ ಹೊಂದುತಾವೆ
ನಮ್ಮ ತರಂಗಗಳ ಏರಿಳಿತಕ್ಕೆ!!

ಕಪ್ಪು ನನ್ನ ನೆಚ್ಚಿನ ಬಣ್ಣ 
ನಾ ನೆಚ್ಚಿಕೊಂಡದ್ದನ್ನೆಲ್ಲ 
ಕಿತ್ತುಕೊಂಡಿದ್ದಾನೆ ಬಗವಂತ;
ಸುಳ್ಳು!! ನಾನಿನ್ನೂ ಕಪ್ಪಗಿದ್ದೇನೆ....

                           --ರತ್ನಸುತ

Saturday, 22 March 2014

ತಡವರಿಸಿ ಬಂದಾಗ

ಕೆಂಪು ದೀಪದ ಕೆಳಗೆ
ಕಂದು ಬಣ್ಣದ ಸೀರೆ
ಹಾರಿ ಹೋಯಿತು ಅದು ನಿನ್ನದೇನೇ?
ಕಂತು ತೀರಿಸುವಲ್ಲಿ
ಕೊಂಚ ಕಾಲದ ಕೊರತೆ
ತಡ ಮಾಡಿದರೆ ತಾಳಬೇಕು ನೀನೇ!!

ಅಂಚ ಕತ್ತರಿಸುತ್ತ
ಅಂಗೈಯ್ಯ ಮೇಲಿಟ್ಟೆ
ಸಂಚು ಅಲ್ಲದೆ ಅದಕೆ ಏನು ಹೆಸರು?
ಜೋಡಿ ರವಿಕೆಯ ತುಂಡು
ತಡಕಾಡಿ ಸಾಕಾಯ್ತು
ಹೋದ ಸಂತೆಗಳಲ್ಲಿ ಸೋತ ಪಸರು

ನಿನ್ನ ನೆರಳಿಗೆ ಬಂತು
ಬೆತ್ತಲಾಗುವ ಯೋಗ
ಬೀದಿ ದೀಪಕೂ ಬಂತು ಚೂರು ಜೀವ
ಗಾಳಿ ಕೆಟ್ಟ ಪೋಲಿ
ನಿನ್ನ ಕುರುಳಲಿ ಜಾರಿ
ಸೀರೆ ಸಹಿತ ಸೆಳೆಯೆ ಬೀಸುತಾವ

ತಾಳು ಇನ್ನು ನಿಮಿಷ
ಕೊನೆ ತಿರುವ ದಾಟಿರುವೆ 
ನಾ ಮುಗಿಸುವೆ ನೆರಳ ಬೆತ್ತಲಾಟ
ಗೆದ್ದ ಗುರುತುಗಳೆಲ್ಲ
ನಾಳೆಗಳ ನೆನಪಿಗೆ
ಸೋಲು ಕಲಿಸುವುದಿಲ್ಲಿ ತಕ್ಕ ಪಾಠ

ಮತ್ತೆ ಆಗದು ಇಂಥ
ತಪ್ಪು ತಪ್ಪಿಯೂ ಕೂಡ
ಅಳತೆ ತಪ್ಪುವ ಎದೆಯ ಅಳತೆ ಇಡುವೆ
ಬಿಗಿಗೊಳ್ಳದಂತೆ 
ಟಕ್ಕು ಸವಲತ್ತಿನಲಿ
ಸೀರೆಗೆ ಹೊಂದುವ ರವಿಕೆ ತರುವೆ

ಎಲ್ಲ ಸುಖಗಳು ಬರೇ
ನೆರಳಿಗಷ್ಟೆ ಕೊಟ್ಟು
ನಾವು ಕುಟ್ಟುವ ಕೆಲಸ ಯಾರ ಪ್ರೀತಿ?
ಆದದ್ದಾಗಲಿ
ಅಡ್ಡಗಾಲಿನ ನಡುವೆ
"ನಾವೊಂದು ಕೈ ಮೇಲೆ" ನೀಯೇನಂತಿ?!!

                                           -- ರತ್ನಸುತ

ಬಾ!!

ಬೆವರಿನ ಉಪ್ಪಿಗೆ 
ಮುಪ್ಪಿನ ಅರಿವು 
ಬರಿಸುವ ಮುನ್ನ
ಹರಿಸುವ ಬಾ

ತೆಕ್ಕೆಯ ಸಡಿಲಿಗೆ 
ಸಿಡಿಲನು ಬಡಿಸಿ
ಕಡಲಿಗೂ ನಾಚಿಕೆ
ತರಿಸುವ ಬಾ 

ಬಳಲುವ ಆತ್ಮ-
ಗಳಲಿನ ಗದ್ದಲ
ಕೇಳಿಸದಂತೆ
ಕೂಡಲು ಬಾ

ಕಣ್ಣಿಗೆ ಎಟುಕದ
ಕನಸುಗಳೆಲ್ಲವ
ಮನಸಿಗೆ ಹತ್ತಿರ-
-ಗೊಳಿಸಲು ಬಾ

ಮೊದಲುಗಳೆಲ್ಲ
ಪರಿಚಿತವಾಗಲಿ
ಕೊನೆಗಳ ಸೋಲಿಗೆ
ಪಳಗಿಸು ಬಾ

ಅಂಜಲಿ ತುಂಬಲಿ
ಹಂಬಲ ಪುಷ್ಪ
ತಿಂಗಳ ಮಂಗಳ-
-ವಾಗಿಸು ಬಾ

ಗೊಂದಲಗೊಳ್ಳದೆ
ತಂಬೆಲರಾಟಕೆ
ಮೈ ಮರೆತು
ತಲೆದೂಗುವ ಬಾ

ಹೇಳಲು ಕೂತರೆ
ಸಾವಿರ ಮಿಲನದ
ಸೋಲಿನ ಸುಳುವಿದೆ
ಸೇರಲು ಬಾ

ಬಾ ಬರಲಾದರೆ
ಒಮ್ಮೆಲೆಗೇ 
ಮತ್ತೆಂದೂ ದೂರಾಗದೆ
ಉಳಿ ಬಾ

ಬಾ ಬಾನಾಡಿಗಳಾಗುವ
ಆಸೆಗೆ
ಬಣ್ಣವ ತುಂಬುವ
ಈಗಲೇ ಬಾ 

                 -- ರತ್ನಸುತ

Thursday, 20 March 2014

"ಪ್ಯಾರಿಸ್" ಒಂದು ಸುಂದರ ನೆನಪು

ರಸ್ತೆ ದಾಟಿತು ನಾಯಿ ಮರಿ
"ಅದೆಂಥ ಸಾಧನೆ?" ಅನ್ನದಿರಿ
ಅದು ದಾಟಿದ್ದು ಪ್ಯಾರಿಸ್ಸಿನ
'ಆರ್ಕ್ ಡಿ ಟ್ರಿಯಾಂಫ್' ವೃತ್ತದ ರಸ್ತೆ!!

ಇಲ್ಲಿ ರಸ್ತೆ ದಾಟಿ ಅನಾಹುತಕ್ಕೆ
ಪೆಟ್ಟಾದರೂ ಸರಿ, ಸತ್ತರು ಸರಿಯೇ 
ಆರೋಗ್ಯ ವಿಮೆ, ಜೀವ ವಿಮೆ
ಬಳಸಲು ಬರುವುದೇ ಇಲ್ಲ

"ಅರೆ!! ನಾಯಿಗ್ಯಾವ ವಿಮಾ ಕಂಪನಿ?"
"ಇದ್ದರೂ ಮಾಡಿಸುವವರಾದರೂ ಯಾರು?"
ಎದ್ದ ಪ್ರಶ್ನೆಗಳು ಕಾಡುತ್ತಲೇ 
ರಸ್ತೆ ದಾಟಿಸಿಯೇ ಬಿಟ್ಟಿತ್ತು !!

ನೆಪೋಲಿಯನ್ನಿನ ಕನಸಿನ ಸ್ಮಾರಕ
ಯುದ್ಧದಿ ಪ್ರಾಣ ತೆತ್ತ
ಜೆನರಲ್ಲುಗಳ ನೆನಪಿನ ಅಚ್ಚು
ಫ್ರೆಂಚ್ ದೇಶದ ಚೊಕ್ಕ ಕಲಾಕೃತಿ

ಕ್ಲಿಕ್..ಕ್ಲಿಕ್.. ಮತ್ತೆರಡು ಪಟ ಸೆರೆ
ನಾನೂ ಇಲ್ಲಿದ್ದೆನೆಂಬ ಗುರುತಿಗೆ
ಗೈಡು ಕೊಟ್ಟ ಗಡುವು ಮುಗಿದು 
ಸುರಂಗದ ನಡಿಗೆ ಬಸ್ಸೆಡೆಗೆ

ವ್ಹೇಲ್ಸಿನ ಯುವರಾಣಿ ಡಯಾನಾ 
ಸತ್ತ ಸ್ಥಳದಲಿ ಕಂಬನಿ ಮಿಡಿದು
ಈಫಿಲ್ ಟವರಿನ ತುತ್ತ ತುದಿಯಲಿ
ಪೂರಾ ಪ್ಯಾರಿಸ್ಸೊಬಗನು ಸವಿದು....

ಸೀಟಿನ ಬದಿಯ ಗಾಜಿಗೆ ಅಂಟಿ
ಉಸಿರನು ಚೆಲ್ಲಿ, ಬೆರಳಲಿ ಗೀಟಿ
ಬೋದಿಲೇರನ ನೆನಪಾಗಿಸಿತು
"ಝೂ ತೆಹ್ಮ್" ಮನ ಉಚ್ಚರಿಸಿತು!!

                                 -- ರತ್ನಸುತ

Wednesday, 19 March 2014

ಕಂಬನಿಯ ಕಾಣ್ತ

ಕಣ್ಸುತ್ತ ಕಣ್ಗಪ್ಪು ಕರಗಿತೇ ಹುಡುಗಿ?
ಕಣ್ಕುಂಭ ಕೈತಪ್ಪಿ ಕಂಬನಿಯು ಜಾರಲು
ಗದ್ದ ಎದೆಗೊರಗಿದೆ ಕೊರಳ ಬಾಯ್ಸೊರಗಿ
ಮೌನವಹಿಸಿ ಮಾತ ಮತ್ತೊಮ್ಮೆ ಗೆಲ್ಲಲು!!

ಗಲ್ಲ ಮೇಲೆಲ್ಲ ಹರಿದಾಡಿದಾ ತೊರೆಗೆ
ದಿಕ್ಕು ಸೂಚಕ ದಾರಿ ಇರದಾದರೇನು
ಮೆಲ್ಲ ತುಟಿ ಜಗ್ಗಿ ಬಿಡು ಬಿಕ್ಕಳಿಕೆ ಬದಿಗೆ
ಗುಳಿ ಬತ್ತಿ ಹೋದಂತೆ ಗೋಳಿಟ್ಟರೂನು!!

ಭಾರ ಹೊರೆಸು ನಿನ್ನ ಖಾಲಿ ಭುಜಗಳಿಗೆ
ರಜೆ ಘೋಶಿಸು ಚಿಂತೆ ಸಂತೆ ಜರುಗಿಸದೆ
ಶಿಕ್ಷೆ ವಿಧಿಸು ಕತ್ತಲಾಗಿಸುವ ಬಾಗಿಲಿಗೆ
ಮನದ ಕಿಟಕಿಯ ತೆರೆ ತೀರ ಯೊಚಿಸದೆ!!

ಗಮನ ಎತ್ತಲೋ ಮಾಯವಾದಂತೆ ತೋಚಿದರೆ
ಒಮ್ಮೆ ನನ್ನೆಡೆ ಬಳಸಿ ಕಣ್ಣೋಟ ಬೀರು
ನಿನ್ನ ನೋವಿನ ಬಳ್ಳಿಯೊಣಯೆಲೆಯ ಘಮಲು ತಾ
ಕ್ಷಣಮಾತ್ರದಲಿ ಕೆದಕಿ ಮುಂದಿಡುವೆ ಬೇರು!!

ಸುಕ್ಕುಗಟ್ಟಿದೆ ಸಾಕು ಮಾಡು ಮಾರಾಯ್ತಿ
ದಾವಣಿ ದುಃಖಿಸಿದೆ ಸದ್ದನ್ನು ನುಂಗಿ
ಮೋಡದ ಕೈ ಹಿಡಿದು ತಂದಾಯ್ತು ಪೂರ್ತಿ
ಅಚ್ಚಿರಿ ಮೂಡಿಸಿದೆ ಈ ನಿನ್ನ ಭಂಗಿ 

ಮುಂದಾದ ಬೆರಳು ತಾ ಹಿಂಜರಿಯುವಾಗ
ಹಿಡಿದಿಡುವ ಸಾಮರ್ಥ್ಯ ಸೋತಂತೆ ಕೊನೆಗೆ
ಬಾದಿಸುವವುಗಳ ಸದೆಬಡಿಯುವೆ ಕೇಳು
ನಿನ್ನ ನಗುಗಾಣದೆ ಮುದವಿಲ್ಲ ಎನಗೆ!!

                                           -- ರತ್ನಸುತ

ಮರಳಿ ಮಣ್ಣಿಗೆ !!

ಮಾರುಕಟ್ಟೆಯ ಹೂವು
ಕೊಂಡವರ ಪಾಲು;
ಮೊಳದಲ್ಲಿ, ಬಿಡಿಯಾಗಿ,
ಮಾರಾಗಿ, ಇಡಿಯಾಗಿ

ಹರಿದು ಹಂಚಿಬಿಟ್ಟ
ವ್ಯಾಪಾರಿ ಪಾಲಿಗೆ
ತಟ್ಟದ ಶಾಪ!!

ಮಾರಿದವ,
ಕೊಂಡವರ ಕುರಿತು
ಕಿಂಚಿಷ್ಟೂ ಕೋಪ-
-ಗೊಳ್ಳದ ಹೂವಿಗೆ
ಯಾವ ಮುಡಿ ನೆಲೆಯೋ?!!

ಪೂರ್ಣತೆಯ ಹಾದಿಯಲಿ
ಮೈಲಿಗಲ್ಲುಗಳಾವೂ 
ಇಲ್ಲದ ಪಯಣ;
ಮೊಗ್ಗಾಗಿ, ಹೂವಾಗಿ
ಬಾಡುದುರಿದ ಪಕಳೆ
ಮಣ್ಣಲ್ಲಿ ಮಣ್ಣಾಗಿ.....

ಹಿಂದಿರುಗಿ ನೋಡುವುದು
ತನ್ನ ಸವತಿ 
ತನ್ನೊಡತಿ ಮಡಿಲಲ್ಲಿ,
ಅಡಿಯಲ್ಲಿ, ಮುಡಿಯಲ್ಲಿ,
ಒತ್ತಾಯ ಜಡದಲ್ಲಿ,
ತನ್ನಂತೆ ಕಡೆಯಲ್ಲಿ.....

ಮರಳಿ ಮಣ್ಣಿಗೆ !!

                -- ರತ್ನಸುತ

Friday, 14 March 2014

ಮುಗಿಲೆಡೆ ಮುನಿದು!!

ಭಯದಲ್ಲಿ ಮುಂದಾಗಿ 
ಒಲವಿದೆ ಅಂದಾಗ
ಬೆಂಬಲಕೆ ಬರದೆ 
ಉಳಿವಾಗ ಮುಗಿಲೇ
ನಾ ಹೇಗೆ ನಂಬಲಿ
ನಿನ್ನ ಹುಸಿ ಮಾತನು?
ನಂಬಿಕೆ ಉಳಿಸಿಕೊಂಡಿಲ್ಲ
ನೀ ಮೊದಲೇ!!

ನೀ ಬರುವೆಯೆಂದು
ಹೂವಿಗಿದೆ ಕೌತುಕ
ಅದ ಹಿಡಿದು ಕಾತರದಿ
ನಿಂತವನಿಗಲ್ಲ;
ಕೊಡೆ ಮರೆತು ಬಂದೆ ನಾ
ನಿಜವೇ ಇರಬಹುದು
ಆದರೂ ತೋಯಿಸುವ ಹಕ್ಕು
ನಿನಗಿಲ್ಲ 

ಗುಡುಗಿ ನನ್ನೆದೆಯಲ್ಲಿ
ತಲ್ಲಣವ ಬಡಿಸಿದೆ
ಎಲ್ಲಿ, ಒಮ್ಮೆ ಮೌನದಲಿ
ನನ್ನ ಗೆಲ್ಲು!!
ಯಾವುದೋ "ಸತ್ಕಾರ್ಯ
ನಿನ್ನ ಆಗಮನದಲಿ"
ಹೀಗನ್ನುವವರ ಮಾತುಗಳೆಲ್ಲ
ಸುಳ್ಳು!!

ಉಪ್ಪರಿಗೆ ಕಣ್ಣೀರ 
ಪಡಸಾಲೆ ಚಿತ್ತಾರ
ಅಳಿಸಿ ಹಾಕುವ ನೀನು
ಉಂಡಾಡಿ ಗುಂಡ
ಪೊಳ್ಳು ಭಕ್ತಿಗೆ ಕರಗಿ
ದೇವರನಿಸಿಕೊಳುವೆ
ಸಮಯ ಸಾಧಕ ನೀನು
ಮಹಾ ಪ್ರಚಂಡ!!

ಇದ್ದದ್ದ ಕಸಿದು
ಇನ್ನೆಲ್ಲೋ ಸುರಿವೆ
ದಲ್ಲಾಳಿ ನೀನಂದರೆ 
ಮುನಿಯ ಬೇಡ!!
ಈಗ ನಿನ್ನಾಟಗಳು
ನನ್ನೆದುರು ನಡೆಯೊಲ್ಲ
ನೀ ಸುಳ್ಳು ಅನ್ನುತಿದೆ
ಅಂಗೈಯ್ಯಿ ಕೂಡ!!

ಬಿಡು ಮುಗಿಲೇ ಆಸೆಯ
ನನ್ನ ಮೆಚ್ಚಿಸಲಾರೆ,
ಎಂದೋ ಸೀಳಿರುವೆ
ನಂಬಿಕೆಯ ಕತ್ತ
ನೀ ಸುರಿದುಕೊಂಡದ್ದು
ನಿನ್ನಿಷ್ಟಕೆ ಅಲ್ಲಿ 
ನನ್ನಿಷ್ಟಗಳು ಮುಳುಗಿದವು
ನಿನಗೆ ಗೊತ್ತಾ?

                    -- ರತ್ನಸುತ

Thursday, 13 March 2014

ಲೆಕ್ಕ ತಪ್ಪುವಾಟ !!

ಹಾಗೊಮ್ಮೆ ಹೀಗೊಮ್ಮೆ
ಆಡಿದ ಸುಳ್ಳಲ್ಲೇ
ಹೀಗೊಂದು ವೈಚಿತ್ರ್ಯ
ನಡೆದು ಹೋಗುತ್ತವೆ
ಅರ್ಥವಾಗದ ನುಡಿಗೆ
ಕಿವಿಯೊಡ್ಡುವ ತವಕ
ಮುಂದೆ ಮುಂದೆ ಎಲ್ಲ 
ಅರ್ಥವಾಗುತ್ತವೆ !!

ಬಿಗಿದಪ್ಪಿಕೊಂಡಾಗ 
ಒಂದೆರಡು ಗುಟ್ಟುಗಳು
ತಾನಾಗೇ ಹರಬಂದು
ಬೆತ್ತಲಾಗುತ್ತವೆ
ಬೆಳಕ ಸಾಲ ಪಡೆದ
ಮಿಂಚು ಹುಳುವಿನ ದಂಡು
ವಿಧಿಯಿಲ್ಲದೆ ಮತ್ತೆ
ಕತ್ತಲಾಗುತ್ತವೆ!!

ಮರದ ತುದಿ ರೆಂಬೆಯಲಿ
ಎಲೆ ಮರೆಯ ಹಣ್ಣುಗಳು
ಯಾರ ಕೈ ಸೇರದೆಯೂ
ಎಂಜಲಾಗುತ್ತವೆ
ತನ್ನಿಷ್ಟಕೆ ಹೊರಳಿ
ಪಳಗಿದ ನಾಲಿಗೆಗೆ
ಸಲುಗೆ ಕೊಟ್ಟ ತುಟಿಯೇ
ಪಂಜರಾಗುತ್ತವೆ!!

ಮಿಂಚು ವೇಘದ ಬಯಕೆ
ಕೊಂಚ ಕೊಂಚವೆ ಕುಂಟಿ
ಒಂಟಿ ಕಾಲಲಿ ನಿಂತು
ನಿಚ್ಚಲಾಗುತ್ತವೆ
ಬುಗ್ಗೆ ಒಡೆದ ಎದೆಯ
ಮೇಲೆ ಚಾಚಿದ ಹಾಳೆ
ಚೆಲ್ಲಾಡಿದಕ್ಷರಕೆ 
ಬಚ್ಚಲಾಗುತ್ತವೆ!!

ಎಲ್ಲಿಂದಲೆಲ್ಲಿಗೋ
ಪಯಣ ಬೆಳೆಸಿದ ಮಾತು
ಸಧ್ಯ ಮೌನದ ಸ್ಥಿತಿಗೆ
ಮಾರುಹೋಗುತ್ತವೆ
ಎರಡಿದ್ದವು ಅಂದು
ಒಂದಾಗಲು ಮುಂದೆ 
ಗಣಿತಕ್ಕೂ ಅಚ್ಚರಿ
ಮೂರಾಗುತ್ತವೆ!!

               -- ರತ್ನಸುತ 

Thursday, 6 March 2014

ಮೊದಲ ಪ್ರೇಮ ಪತ್ರ ಬರೆದು!!

ಚಿತ್ತು ಹೊಡೆದು, ಹರಿದು 
ಉಂಡೆ ಮಾಡಿದ ಹಾಳೆಗಳೆಷ್ಟೋ 
ಚೆಲ್ಲಾಡಿದ್ದವು ಕೋಣೆ ತುಂಬ, 
ಕಸದ ಬುಟ್ಟಿಯ ಸಹವಾಸ ಬೇಡದೆ 
ಮತ್ತೆ ಹರಡಿಸಿಕೊಳ್ಳುವ ತವಕದಲ್ಲಿ 
 
ಮೊದಲೆಲ್ಲೋ ಬರೆದ ಸಾಲು 
ಇಷ್ಟವಾಗತೊಡಗಿತ್ತು ನಂತರಕೆ 
ಆಗ ಎಸೆದೆ, ಈಗ ನೊಂದೆ 
ಮತ್ತೆ ಹಡೆಯುವಲ್ಲಿ ನಿಶಕ್ತನಾಗಿ 
ಗುರುತು ಹಚ್ಚೆ ಹೊರಟೆ 
 
ನಿರ್ಭಾವುಕ ಹೆಣಗಳಂತೆ ಕಂಡ 
ಭಾವನೆಗಳ ಹುದುಗಿಸಿಟ್ಟ 
ನಿಷ್ಕಳಂಕ ಮೌನ ಹೊದ್ದ 
ನನ್ನ ಕೂಸುಗಳ ಕೊರಳು ಬಿಗಿದಿತ್ತು 
ನನ್ನ ಕರುಳು ಕಿವುಚಿತ್ತು 
 
ಕರಗಿದ ಕಣ್ಣುಗಳು ಬಿಟ್ಟ 
ಸುಕ್ಕುಗಳ ಮೇಲೆ ಬರೆದಾಗ
ಹಾಳೆಗೂ ಎಲ್ಲಿಲ್ಲದ ಸಂಕಟ 
ಥೇಟು ನನ್ನದೇ ಸ್ಥಿತಿ ಅವುಗಳಿಗೂ;
ಒಪ್ಪಂದಕೆ ಮುಂದಾದವು 
 
ಬೆತ್ತಲಾದವೆಲ್ಲ ಅಕ್ಷರಗಳು 
ಚೆಲ್ಲಿಕೊಂಡ ಬೆರಳಿನೆದುರು 
ಹರಿಸಿದಂತೆ ಹರಿದು, ಬಿರಿದು 
ಒಂದೇ ಓಟಕೆ ಕಂಡಿವು
ತೊದಲ ನಡುಕ, ಕೊನೆಯ ತಿರುವು 
 
ಹೊರಳಿ ನೋಡಿದೆ 
ಕಾಗದ ಉಂಡೆಗಳೆಲ್ಲವೂ ಮಾಯ;
ವಿಲೀನದ ಸೂಚನೆಯೋ?
ಕಳುವಿನ ಸೂಚನೆಯೋ?
ಗೋಜಲಿನ ಒಗಟು!!
 
ಅಂತೂ
ಪತ್ರ ಮುಗಿಸುವ ಹೊತ್ತಿಗೆ
ಬೆಳಕಿಗೂ ಮಂಪರು
ಹಚ್ಚಿಟ್ಟ ದೀಪದ ಹಣತೆ
ಇಣುಕಿಣುಕಿ ನೋಡುತ್ತಿತ್ತು
ಹುಸಿ ಗಾಳಿಯ ಬೆನ್ನು ಹತ್ತಿ

ನಾಳೆಯ ಕಂಪನಕೆ 
ಅಲುಗಾಡಿ ಬಿರಿಯದಿದ್ದರೆ ಸಾಕು 
ಪತ್ರ ಹಾಗು ಈ ಹೃದಯ!!

                         -- ರತ್ನಸುತ

ಒಂದು ಅಮರ ಕಥನ !!

ಹೂವನ್ನು ಕೊಂದದ್ದು ದುಂಬಿ 
ಹೂವ ಪಾಳೆಯದಲ್ಲಿ ಗುಲ್ಲು 
ದುಂಬಿಯ ಕೊಂದದ್ದು ಹೂವು 
ದುಂಬಿ ಪಾಳಯದಲ್ಲಿ ಪುಕಾರು

ಹೂ-ದುಂಬಿಗಳ ನಡುವೆ 
ಶೀತಲ ಸಮರದ ನಿಮಿತ್ತ 
ಒಂದಿಡೀ ದಿನದ ಬಹಿಷ್ಕಾರ 
ಇಳಿ ಸಂಜೆಗೇಕೋ ಬೇಜಾರು 
 
ಝೇಂಕಾರ ಕೇಳದ ತಂಗಾಳಿ 
ನಿಚ್ಚಲಗೊಂಡಿದೆ ಯಾರದ್ದೋ ಎದೆಯಲ್ಲಿ;
ಶಿಖರ ತುದಿಯಲ್ಲಿ ಸೂರ್ಯ 
ಉಗುರು ಕಚ್ಚಿ ನಿಂತ, ಮುಖ ಕೆಂಪಾಗಿಸಿ 

ಸಂಬಂಧ ಪಡದಂತೆ ಮೋಡಗಳು 
ಅಬ್ಬೇಪಾರಿಗಳಂತೆ ಎತ್ತಲಿಂದೆತ್ತಲಿಗೋ ತೇಲಿವೆ;
ವಟರುಗುಡುವ ಕಪ್ಪೆಗಳ ಬಾಯಿಗೆ 
ಬೆಂಕಿ ಸುರಿಯಲೆಂದು ಕಾದಂತಿದೆ ಬಾನು 

ಕೊಳ್ಳುವವರಾರಿಲ್ಲದೆ ಇಂದು 
ಹೂವಾಡಗಿತ್ತಿಯ ಮೊಳದ ಅಳತೆ 
ತುಸು ಹೆಚ್ಚಿಗೇ ಇರುತ್ತದೆ; 
ಸದ್ಯ, ಜಗ್ಗಿದ ದಾರಕ್ಕೆ ಬಿಗಿಗೊಳ್ಳದು ಗಂಟು 

ಕೈ-ಕೈ ಹಿಡಿದು ಬಹುದೂರ ಸಾಗಿದರೂ 
ಮೈ ಚಳಿ ಬಿಡದಂತೆ ಹುದುಗಿದ್ದ 
ಮಾತಿನ ನೆರವಿಗೆ ಮೌನದ ಕಂಬಳಿ, 
ಒಂದು ದೀರ್ಘ ನಿದ್ದೆ 

ಮಕರಂದ ಮೈದುಂಬಿ ಹೆಪ್ಪುಗಟ್ಟಿದ ಗಡಿಗೆ 
ನೊಣಗಳು ಗುಯ್ಗುಡುವ ಹಿಂಸೆ 
ಹಠದ ಬಾಗಿಲ ಜಡಿದು ಹಸಿವ ಕೋಣೆಯಲಿಯ
ದುಂಬಿಗಳಿಗಾವ ಪ್ರಶಂಸೆ?!!

ಹೂವ ಕೊಂದದ್ದು ದುಂಬಿ 
ದುಂಬಿಯ ಕೊಂದದ್ದು ಹೂವು 
ಪ್ರಣಯ ಭಕ್ತಿಗಾಗಿ 
ಲೋಕದಿಂದ ವಿಮುಕ್ತಿಗಾಗಿ !!

ಹೀಗಾಗಿಯೂ; 
ಹೂವನ್ನು ಕೊಂದದ್ದು ದುಂಬಿ
ಹೂವ ಪಾಳೆಯದಲ್ಲಿ ಗುಲ್ಲು
ದುಂಬಿಯ ಕೊಂದದ್ದು ಹೂವು
ದುಂಬಿ ಪಾಳಯದಲ್ಲಿ ಪುಕಾರು

                       -- ರತ್ನಸುತ

Tuesday, 4 March 2014

ಹೀಗೆಲ್ಲ ಅನಿಸುವುದು !!

ಹಾಗೊಮ್ಮೆ, ಹೀಗೊಮ್ಮೆ ಇಣುಕಬೇಕು 
ಹೃದಯ 
ಕೈ ಜಾರಿ ಬಿಡಬಹುದು 
ಮೆಲ್ಲ-ಮೆಲ್ಲ 
ಅಲ್ಲೊಮ್ಮೆ, ಇಲ್ಲೊಮ್ಮೆ ಹುಡುಕಬೇಕು
ಕನಸು 
ನಿನ್ನನ್ನು ಹೊರತಾಗಿ 
ಬೇಡುತಿಲ್ಲ 
 
ಏನೆಲ್ಲಾ ಕಥೆಯನ್ನು ಹೇಳಬೇಕು
ಮನಸು 
ಮಗುವಂತೆ ಮುದ್ದಾಗಿ 
ಮಲಗಲೆಂದು 
ಮಿಕ್ಕಂತೆ ಮಾತುಗಳು ಸೋಲಬೇಕು
ಮೌನ 
ತನ್ನ ಪಾಡಿಗೆ ತಾನು 
ಮೆರೆಯಲೆಂದು 

ನಕ್ಕಾಗ ನಗುವಲ್ಲಿ ಮುಳುಗಬೇಕು 
ಬುದ್ಧಿ 
ಕಳೆದಂತೆ ನಾನಲ್ಲಿ 
ಮಗ್ನಗೊಂಡು 
ಸಿಕ್ಕಾಗ ಸೆರೆಯಲ್ಲಿ ಸಿಲುಕಬೇಕು
ಒಮ್ಮೆ 
ಮರುಳಾಗಿ ಮತ್ತೊಮ್ಮೆ 
ಅರಿತುಕೊಂಡು 
 
ಗಾಯಾಳು ನಾನಾಗಿ ನರಳಬೇಕು 
ನೋವು 
ಮರೆಸೋಕೆ ನೀನಲ್ಲಿ 
ಬರುವ ಹಾಗೆ 
ನಾ ಕೇಳೋ ಪ್ರಶ್ನೆಗಳು ಮಾಡಬೇಕು 
ನಿನ್ನ 
ಚಿಂತೆಯ ಸಂತೆಯಲಿ 
ಬಿಟ್ಟ ಹಾಗೆ 
 
ಮತ್ತೊಮ್ಮೆ ನಾ ಹಾಡು ಗೀಚಬೇಕು 
ನೀನು 
ಕೋಪಕ್ಕೆ ತುತ್ತಾಗಿ 
ಹರಿದು ಬಿಡಲು 
ನೀನೊಮ್ಮೆ ನನ್ನನ್ನು ಕಚ್ಚಬೇಕು 
ಗಿಳಿಯು 
ರುಚಿ ಕಂಡ ಸೀಬೆ
ನಾನಾಗಿ ಬಿಡಲು 
 
ಬಾನಲ್ಲಿ ಜೊತೆಯಲ್ಲಿ ಹಾರಬೇಕು 
ಒಮ್ಮೆ
ಕ್ಷಿತಿಜಕ್ಕೂ ಅಚ್ಚರಿಯ 
ತರಿಸುವಂತೆ 
ಮೋಡದಲಿ ಮನೆಯೊಂದ ಮಾಡಬೇಕು 
ಅಲ್ಲಿ
ವಿರಹಕ್ಕೆ ಪರಿಹಾರ 
ಸಿಕ್ಕಿದಂತೆ!!
 
                                     -- ರತ್ನಸುತ

ಮೌನ ಪಯಣ !!

ರಕ್ತ ಸಿಕ್ತ ಹಡಗು, 
ಕೆಂಪು ಸಾಗರ, 
ಸೂರ್ಯಾಸ್ತಮದ ಸಮಯ, 
ಆಯಾಸದ ಕಂಗಳು,
ಸಿಗದ ಬಂದರು,  
ಇಲ್ಲದ ಲಂಗರು, 
ಒಂಟಿ ಪಯಣಿಗ, 
ಮೌನ ಸಂಗಡಿಗ!!
 
ಮರು ಜೀವ ಪಡೆದ 
ಎಂದೋ ಆದ ಗಾಯ 
ಆ ನೋವು 
ಕಹಿ ನೆನಪು. 
ಮೈ ಮರೆಯುವಂತಿಲ್ಲ 
ದಿಕ್ಕು ತಪ್ಪಬಹುದು;
ಯಾವ ದಿಕ್ಕು?!!
ತೀರದ ಅನ್ವೇಷಣೆ!!
 
ಗಡಿಯಾರದ
ಸುಳ್ಳು ಬರವಸೆ, 
ಇನ್ನೂ ಸದ್ದು ಮಾಡಿದೆ 
ಟಿಕ್-ಟಿಕ್-ಟಿಕ್ 
ಅದ ನಂಬುವ ಗೀಳು
ಮುಗಿಯುವಂತಿಲ್ಲ; 
ಸಮಯ ಸರಿಯಾಗಿದೆ 
ಹಾಳಾಗಲು!!
 
ಹಸಿದ ತಿಮಿಂಗಿಲಗಳ 
ನಿಲ್ಲದ ಅಳಲು;
ಮುರಿಯಬೇಕು ಹಡಗು 
ದಾಟಿಸಬೇಕು ಹಸಿವ,
ಆಗಲೇ ವಿಮುಕ್ತಿ
ಕಡಲ ಮೊರೆತಕ್ಕೆ;
ನಾ ಎಲ್ಲರಿಗೂ ಬೇಕಾದವ 
ನಿರ್ಜೀವವಾಗಿ!!
 
ಮುಟ್ಟಿ ನೋಡಿಕೊಂಡೆ 
ನಾಡಿ ಮಿಡಿಯುತ್ತಲೇ ಇತ್ತು
ತುಸು ಅವಸರದಲ್ಲಿ;
ಹಣೆಯ ಕಾವಿಗೆ
ಬೆವರೂ ಹರಿದಿತ್ತು 
ತಕ್ಕ ಮಟ್ಟಿಗೆ 
ಸಮತೋಲನದ ಕುರುಹು?!!
ಪ್ರಕೃತಿ ನಕ್ಕಿತು ಉಸಿರುಗಟ್ಟಿ!!
 
ಎಲ್ಲವನ್ನೂ ಒಂದಾಗಿಸಿತು ಕತ್ತಲು 
ಬಾನು, ಭೂಮಿ,
ನಾನು, ಕಡಲು,
ಹಡಗು, ತಿಮಿಂಗಿಲ,
ಗಡಿಯಾರ, ಮುಳ್ಳು;
ಟಿಕ್-ಟಿಕ್-ಟಿಕ್
ಸಮಯ ಸರಿಯುತ್ತಲೇ ಇದೆ 
ನಾಳೆಯ ಘೋರತೆಗೆ ಸಜ್ಜಾಗಿ!!
 
                        -- ರತ್ನಸುತ

Monday, 3 March 2014

ಸ್ವಪ್ನಾವಲೋಕನ !!

ನೀ ನನ್ನ 
ನೂರು ಮಕ್ಕಳ ತಾಯಿ,
ನಾ
ಸಹಸ್ರಾರು ಭ್ರೂಣಕ್ಕೆ ಕಾರಣ ಕರ್ತ!!
 
ಕಣ್ಣಲ್ಲೇ ಕಚ್ಚಿ
ಮಾಡಿದ ಗಾಯಕ್ಕೆ 
ನೀ ಹಚ್ಚಿದ ಮದ್ದು
ಮತ್ತೊಂದು ಮಿಲನಕ್ಕೆ ಸಾಕ್ಷಿ 
ಮತ್ತೊಂದು ಸ್ಖಲನ, 
ಮತ್ತೊಂದು ಸುದೀರ್ಘ ನಿರ್ಲಿಪ್ತತೆ!!
 
"ತ್ರಾಣಕ್ಕೆ ತುದಿಗಾಣಿಸದ 
ಪ್ರಣಯ ತೊಟ್ಟಿಲಲ್ಲಿ 
ತೂಗಾಡುತ್ತಲೇ 
ತೀರಿಸಿಕೊಂಡ ಋಣ 
ಹೊಸ ಭಾರವ ಹೊರಿಸಿದೆ" 
ಎಂದು ಸನಿಹವಾದಾಗೆಲ್ಲ 
ಒಂದು ಮುಗುಳು 
ಆಸೆ ಮುಗಿಲು!!
 
ಒಂದೊಂದು ಬಾರಿ 
ಭಾರಿ ಕಡಲ ದಾಟಿ 
ಮೈಯ್ಯಲ್ಲಾ ಲವಣಗೊಂಡಾಗ 
ಆಚೆ ದಡದಿ ಕಿತ್ತೆಸೆದ 
ಬೇಡದ ವಸ್ತ್ರಗಳೇ ಬೇಕಾದವು 
ಒಬ್ಬರ ಮೈಯ್ಯನ್ನೊಬ್ಬರು 
ತಡವಲು,
ಶುದ್ಧರಾಗಲು. 
 
ಎಲ್ಲಿಯ ಶುದ್ಧತೆ?;
ಹಾಲ ಬಟ್ಟಲ ಒಳಗೆ 
ಜೇನು ಸಕ್ಕರೆ ಬೆರೆತು 
ಹಾಲು ಜೇನಾಗಿ 
ಜೇನು ಹಾಲಾಗಿ 
ಶುದ್ಧಗೊಂಡದ್ದು ಬಟ್ಟಲು,
ಸವಿದ ನಾಲಿಗೆ,
ಕಿಟಕಿ ಮರೆಯ ಚಂದ್ರ!!
 
ಮತ್ತೊಮ್ಮೆ ನನ್ನ ಹೊತ್ತಿದ್ದೆ ನೀ 
ಗಾಂಧಾರಿಗೆ ಸಮಳಾಗಿ;
ಕಾಮ ನಿಚ್ಚಲವಲ್ಲ, 
ನವ ಮಾಸಂಗಳು ಕಾಯಲಾರದೆ 
ಸವತಿಯರ ಸಂಗಡ 
ಸರಸ-ಸಲ್ಲಾಪ;
ಕಾಮಾಂಧನಿಗೆ ಮೈಯ್ಯೆಲ್ಲಾ ಕಣ್ಣು 
ಕತ್ತಲ ಕೂಪದಲ್ಲಿ!!

ಕನಸಲ್ಲಿ ಕಾಮಿಸಲ್ಪಟ್ಟ 
ಓಹ್ ರಮಣಿಯರೇ!!
ಕ್ಷಮೆಗೆ ಅರ್ಹನಲ್ಲ ನಾನು; 
ನಿಮ್ಮಿಚ್ಛೆಗೆ ಶಿಕ್ಷೆಯನ್ನ 
ನಿಮ್ನಿಮ್ಮ ಕನಸುಗಳಲ್ಲಿ 
ನೀವೇ ವಿಧಿಸಿಕೊಳ್ಳಿ, ನನ್ನಿಂದಾಗದು 
ನನ್ನ ಕನಸುಗಳು ನಿಯಂತ್ರಿಸಲಾಗದಷ್ಟು 
ಎಲ್ಲೆ ಮೀರಿವೆ!!
 
                                   -- ರತ್ನಸುತ 

Sunday, 2 March 2014

ಆಕೆ ನೀನಲ್ಲ ಬಿಡು !!

ಗೇಲಿ ಗಲ್ಲದ ಹುಡುಗಿ 
ನೀನಲ್ಲ ಬಿಡು ಆಕೆ,
ಅವಳು ನಾನ್ನಾಕೆ;
ಮಾತಿಗೇ ನಾಚಿದವಳಾಕೆ 
ನೆಚ್ಚಿನ ಬಣ್ಣದ 
ಲಂಗದ ಲಾಡಿಯಲಿ 
ನನ್ನ ಕಟ್ಟಿಟ್ಟು, 
ಮುತ್ತಿಟ್ಟು, ಮುಂದೆ.... 
 
ಅದೆಷ್ಟು ಬಣ್ಣದ ಸಾಲು 
ಸೋತವನ ಮರುಳು ಮಾಡಲಿಕ್ಕೆ?!!
ಎಣಿಸುತ್ತಲೇ ನಾನೂ 
ಕೊನೆ ಸಾಲಲ್ಲಿ ನಿಂತಿದ್ದೆ 
ಬಣ್ಣವಾಗಿ,
ಸೋತ ಸುಣ್ಣವಾಗಿ; 
ಕುಪ್ಪಸಕ್ಕೆ ಹೊಂದುಕೊಳ್ಳದೆ 
ಲಂಗದಲ್ಲೇ ಉಳಿದು 

ಹೆಸರು ಕೇಳುವ ಮುನ್ನ 
ಪಿಸು ಮಾತ ಚೆಲ್ಲಿ 
ಮೂಖನಾಗಿಸಿದಾಕೆ 
ನೀನಲ್ಲ, ಅವಳು; 
ಹೆಸರು ಹೇಳಲೇ ಇಲ್ಲ, 
ಬೇಕಾಗಿಯೂ ಇರಲಿಲ್ಲ
ನೆರಳುಗಳು ಆಗಲೇ 
ಒಪ್ಪಂದಕೆ ಸಹಿ ಮಾಡಿದ್ದವು!!

ಕಾಮಿಸಿದ್ದು ನಿಜ; 
ಮೊದಲ ನೋಟಕ್ಕೆ 
ಹೀಗೆಲ್ಲ ಸಹಜ 
ಪಾಪಿ ಹುಡುಗರಲ್ಲಿ. 
ಅದಕ್ಕಾಗೇ ಚೂರು 
ಮುಜುಗರದಲ್ಲಿ ಹತ್ತಿರವಾದೆ 
ಲಜ್ಜೆಗೆ ಮೆತ್ತಿದ 
ಮಸಿಯ ಒರೆಸಿಕೊಂಡು 

ನೀನಲ್ಲ ಬಿಡು 
ಬಿಗಿಹಿಡಿದುಕೊಂಡವಳು;
ಮಿಲನದಲ್ಲಿ ಎದೆ ಸಹಿತ 
ಕರಗಿತ್ತು ನನ್ನದು, ಆಕೆಯದ್ದೂ.  
ಇಗೋ ಎಷ್ಟು ಅಂತರ 
ಎಷ್ಟೇ ಸನಿಹಗೊಂಡರೂ ಇಲ್ಲಿ 
ರೆಪ್ಪೆ ಸರಾಗವಾಗಿ ಬಡಿದುಕೊಳ್ಳುತ್ತಿದೆ 
ಅಧರಗಳು ಕಂಪಿಸುತ್ತಲೇ ಇಲ್ಲ!!

ನೀನೇ ಆಗಿದ್ದರೆ 
ಎಲ್ಲಿ ಆ ಏದುಸಿರು?
ಏರಿಳಿದೇಟಿಗೆ 
ಪರಚು ಗಾಯವ ಬಿಟ್ಟು 
ಹಿಂದೆಯೇ ಗಂಧ ಲೇಪಿಸಿ 
ತಂಪೆರೆದ ಕೈ ಬೆರಳು?
ಉದರದಲ್ಲಿ ಬಡಿಸಿದ 
ಕಚಗುಳಿಯ ತುತ್ತು?

ಇನ್ನು ನಿನ್ನ ಮರ್ಮ 
ನನ್ನ ನಿದ್ದೆ ಕೆಡಿಸಲಾರದು;
ನಿದ್ದೆಗೆಡಿಸುವಾಕೆ ಸಿಕ್ಕು 
ಒಂದಿರುಳು ಕಳೆದಾಗಿದೆ. 
ಕನಸಿನ ರಾಣಿಯೇ ಕ್ಷಮಿಸು!!
ಪಲ್ಲಂಗಕೆ ನಿನ್ನ ಸಂಗ ಅನವಶ್ಯಕ,
ಸಂಗಾತಿ ಸಿಕ್ಕಿಹಳು 
ಕಳೆದು ಹೋಗು !!

                      -- ರತ್ನಸುತ 

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...