ವಿನಾಕಾರಣ ಪ್ರೇಮಿಸುವಾಗ

ಕನ್ನಡಿಗಂಟಿದ ನಿನ್ನ ಕಣ್ಗಳ
ಸೆಳೆವುದಾದರೂ ಎಂದಿಗೆ?
ಅರಿತುಕೊಳ್ಳುವ ಸೌಜನ್ಯವೇ
ಇಲ್ಲವಾಯಿತೇ ಕಣ್ಣಿಗೆ?
ಮಿಂಚು ಹೊಂಚಿದೆ ಕೊಂಚ ಕೊಂಚವೇ
ನನ್ನ ಉರಿಸುವ ಸಲುವಿಗೆ
ಸತ್ತು ಹೋದೆನು ನಿನ್ನ ಕಾಣುತ
ಈಗ ಬೇಡುವೆ ಬದುಕಿಗೆ

ಎತ್ತ ಕಾಣಲಿ ಸುತ್ತ ಮುತ್ತಲೂ
ಮತ್ತು ಏರಿವ ಸೂಚನೆ
ಮೈಯ್ಯ ಮೇಲಿನ ಪ್ರಜ್ಞೆ ಸ್ಥಿರತೆಯ
ಕಳುದುಕೊಳ್ಳಲೇ ಸುಮ್ಮನೆ?
ಖಾಲಿ ಆಸೆಗೆ ನಿನ್ನ ಮನಸನು
ಗೆಲ್ಲಲಾಗದು ತಿಳಿದಿದೆ
ಪೋಲಿತನವನು ಬಿಟ್ಟು ಬರೆದರೆ
ಪದಗಳೇ ಸಿಗದಾಗಿದೆ

ಹೇಳಿ ಕಳಿಸುವೆ ಗಾಳಿ ಕೈಯ್ಯಲಿ
ಹೇಳಲಾಗದ ಸಂಗತಿ
ಕೇಳಬೇಕು ನೀ ನಡುವೆ ವಹಿಸಿದ
ಮೌನ ನೀಡುವ ಮಾಹಿತಿ
ನಾಚಿಕೊಳ್ಳುತ ನುಂಗಿಕೊಂಡೆನು
ಮೂರೇ ಮೂರು ಪದಗಳ 
ನಾನು ಕೇವಲ ಬಣ್ಣವಷ್ಟೇ
ನಿನ್ನ ಚಿತ್ರಣ ಅಸದಳ 

ರೋಮಗಳಿಗೆ ಪ್ರೇಮ ಪಾಠವ
ಹೇಳಿಕೊಂಡೆನು ಬಿಡುವಲಿ
ದಿನಕ್ಕೊಂದಂತೆ ಇಟ್ಟು ಕರೆವೆ 
ಅಂದಕೊಪ್ಪುವ ಹೆಸರಲಿ
ಎಲ್ಲಿ ಕನ್ನಡಿ? ಕರಗಿ ಹೋಯಿತು!!
ನಿನ್ನ ರೂಪವ ಬಿಂಬಿಸಿ
ದುಂಬಿ ಕೆರಳಿತು ಮಧುವ ಹೀರಿ
ನೀನು ಸೋಕಿದ ಹೂವಲಿ

ಹಣೆಯ ಮೇಲ್ಗಡೆ ಬೈತಲೆಯನು
ಮೊನ್ನೆ ಕನಸಲಿ ಕಂಡೆನು
ಸ್ವರ್ಗ ದಾರಿಯೂ ಅಂತೆ ಕಂಡು
ತೀರ ಗೊಂದಲಗೊಂಡೆನು
ಹೀಗೆ ಇನ್ನು ಅದೆಷ್ಟೋ ಗೊಂದಲ
ಕೂತು ಬಗೆಹರಿಸೋಣವೇ?
ಕಾಲ ಮುಳ್ಳಿನ ಪಾಲಿಗೆ
ಕಾಯೋ ಸಜೆ ವಿಧಿಸೋಣವೇ?

                           -- ರತ್ನಸುತ

Comments

  1. 'ಪೋಲಿತನವನು ಬಿಟ್ಟು ಬರೆದರೆ
    ಪದಗಳೇ ಸಿಗದಾಗಿದೆ' ಹಂಗಂತೀರಾ? ;-)

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩