ಒಮ್ಮೆ ಕೇಳಿಸಿಕೋ !!

ಬೆನ್ನೀರ ಮಜ್ಜನದಿ
ಒದ್ದೆಗೂದಲ ಹರಡಿ
ಹಿಡಿ ಹಿಡಿಯ ಎದೆಗಿಟ್ಟು
ಮೆದುವಾಗಿ ಒರೆಸುವಲಿ
ಕೂದಲಂಚಿಗೆ ಕದ್ದು
ಜಾರುವ ಹನಿಗಳ 
ಎಂದಾದರೂ ಕೇಳು
ನನ್ನ ಕುರಿತು

ಬಿಟ್ಟು ಬಂದ ದಾರಿ
ನೂರು ಹೆಜ್ಜೆಯನಿಟ್ಟು
ಕಟ್ಟಿದ ಕಾಲ್ಗೆಜ್ಜೆ
ಮಾತಿಗೆ ಕಿವಿಗೊಟ್ಟು
ನೆರಳನ್ನು ಸವರುತ್ತ
ಮುದ್ದಿಸಿ ಕೇಳು
ಸಿಗಬಹುದು ನಿನಗಲ್ಲಿ
ನನ್ನ ಗುರುತು

ಮುಡಿಯಲ್ಲಿ ಮೆರೆದಾಡಿ
ಮರುಗಾಲ ಮಡಿದಂಥ
ಶಾಪಗ್ರಸ್ತ ಹೂವು
ತರ್ಕಕ್ಕೆ ನಿಂತಿದೆ
ಹುಸಿಯಾಗಿ ಆಲಿಸು
ಅದರ ಮಾತನ್ನ
ಬಾಡದೆ ಸಾಯುವುದು
ಹಾಗಾಗದ ಹೊರತು

ಇನ್ನೆಷ್ಟು ಬಾರಿ 
ಹೆಬ್ಬೆರಳ ಗೀರಿ
ನನ್ನೆದೆಯ ಮಣ್ಣನು
ಕೆದಕಿ ಹಾಕುವುದು
ಹೆಬ್ಬೆರಳ ದಿಟ್ಟತನ
ಹೃದಯಕ್ಕೆ ತುಂಬಿಸು
ನನ್ನೆಸರ ಪಿಸುಗುಡಲಿ
ಆಗಾಗ ಮರೆತು 

ಇದ್ದಷ್ಟೂ ಏಕಾಂತ
ಇನ್ನಷ್ಟು ಜೊತೆಗೂಡಿ
ಮತ್ತಷ್ಟು ನೆರವಾಗು
ಗೊಂದಲದ ಮನಕೆ
ಬೇರೇನೂ ವಹಿಸದೆ
ಚಿಂತೆಗೀಡು ಮಾಡು
ಕಿಂಚಿಷ್ಟು ಯೋಚಿಸಲಿ
ಮತ್ತೂ ಕುಳಿತು

ಕಡಿವಾಣದಲಿ ಚೂರು
ಸಲುಗೆ ಕೊಟ್ಟು ನೋಡು
ಮಾತುಗಳೇ ಎಲ್ಲವನು
ಹೇಳುವಂತದ್ದಲ್ಲ
ಕೆಲವು ಸಲ
ಮೂಖರಾಗುವುದೇ ಚಂದ
ಮುರಿವ ಹಾಡಿಗಿಂತ
ಮೌನವೇ ಒಳಿತು

                   -- ರತ್ನಸುತ

Comments

  1. Ultimate:
    "ಮುದ್ದಿಸಿ ಕೇಳು
    ಸಿಗಬಹುದು ನಿನಗಲ್ಲಿ
    ನನ್ನ ಗುರುತು"

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩