ಒಂದು ಅಮರ ಕಥನ !!

ಹೂವನ್ನು ಕೊಂದದ್ದು ದುಂಬಿ 
ಹೂವ ಪಾಳೆಯದಲ್ಲಿ ಗುಲ್ಲು 
ದುಂಬಿಯ ಕೊಂದದ್ದು ಹೂವು 
ದುಂಬಿ ಪಾಳಯದಲ್ಲಿ ಪುಕಾರು

ಹೂ-ದುಂಬಿಗಳ ನಡುವೆ 
ಶೀತಲ ಸಮರದ ನಿಮಿತ್ತ 
ಒಂದಿಡೀ ದಿನದ ಬಹಿಷ್ಕಾರ 
ಇಳಿ ಸಂಜೆಗೇಕೋ ಬೇಜಾರು 
 
ಝೇಂಕಾರ ಕೇಳದ ತಂಗಾಳಿ 
ನಿಚ್ಚಲಗೊಂಡಿದೆ ಯಾರದ್ದೋ ಎದೆಯಲ್ಲಿ;
ಶಿಖರ ತುದಿಯಲ್ಲಿ ಸೂರ್ಯ 
ಉಗುರು ಕಚ್ಚಿ ನಿಂತ, ಮುಖ ಕೆಂಪಾಗಿಸಿ 

ಸಂಬಂಧ ಪಡದಂತೆ ಮೋಡಗಳು 
ಅಬ್ಬೇಪಾರಿಗಳಂತೆ ಎತ್ತಲಿಂದೆತ್ತಲಿಗೋ ತೇಲಿವೆ;
ವಟರುಗುಡುವ ಕಪ್ಪೆಗಳ ಬಾಯಿಗೆ 
ಬೆಂಕಿ ಸುರಿಯಲೆಂದು ಕಾದಂತಿದೆ ಬಾನು 

ಕೊಳ್ಳುವವರಾರಿಲ್ಲದೆ ಇಂದು 
ಹೂವಾಡಗಿತ್ತಿಯ ಮೊಳದ ಅಳತೆ 
ತುಸು ಹೆಚ್ಚಿಗೇ ಇರುತ್ತದೆ; 
ಸದ್ಯ, ಜಗ್ಗಿದ ದಾರಕ್ಕೆ ಬಿಗಿಗೊಳ್ಳದು ಗಂಟು 

ಕೈ-ಕೈ ಹಿಡಿದು ಬಹುದೂರ ಸಾಗಿದರೂ 
ಮೈ ಚಳಿ ಬಿಡದಂತೆ ಹುದುಗಿದ್ದ 
ಮಾತಿನ ನೆರವಿಗೆ ಮೌನದ ಕಂಬಳಿ, 
ಒಂದು ದೀರ್ಘ ನಿದ್ದೆ 

ಮಕರಂದ ಮೈದುಂಬಿ ಹೆಪ್ಪುಗಟ್ಟಿದ ಗಡಿಗೆ 
ನೊಣಗಳು ಗುಯ್ಗುಡುವ ಹಿಂಸೆ 
ಹಠದ ಬಾಗಿಲ ಜಡಿದು ಹಸಿವ ಕೋಣೆಯಲಿಯ
ದುಂಬಿಗಳಿಗಾವ ಪ್ರಶಂಸೆ?!!

ಹೂವ ಕೊಂದದ್ದು ದುಂಬಿ 
ದುಂಬಿಯ ಕೊಂದದ್ದು ಹೂವು 
ಪ್ರಣಯ ಭಕ್ತಿಗಾಗಿ 
ಲೋಕದಿಂದ ವಿಮುಕ್ತಿಗಾಗಿ !!

ಹೀಗಾಗಿಯೂ; 
ಹೂವನ್ನು ಕೊಂದದ್ದು ದುಂಬಿ
ಹೂವ ಪಾಳೆಯದಲ್ಲಿ ಗುಲ್ಲು
ದುಂಬಿಯ ಕೊಂದದ್ದು ಹೂವು
ದುಂಬಿ ಪಾಳಯದಲ್ಲಿ ಪುಕಾರು

                       -- ರತ್ನಸುತ

Comments

 1. ತುಂಬಾ ಚೆನ್ನಾಗಿದೆ! ಕವನದ ಮೊದಲ ಸಾಲುಗಳೇ ಸ್ವಾರಸ್ಯಕರ ಸನ್ನಿವೇಶವೊಂದನ್ನು ಪ್ರಸ್ತಾಪಿಸಿ ಗಮನ ಸೆಳೆಯುತ್ತದೆ. ಮಿಕ್ಕ ಸಾಲುಗಳೇ ಅಷ್ಟೇ ಸೊಗಸಾಗಿ ಕುತೂಹಲ ಕಾದಿರಿಸಿಕೊಂಡು ಒದುಗನನ್ನು ಹಿಡಿದಿಡುತ್ತದೆ.. ಇಷ್ಟ ಆಯ್ತು.

  ReplyDelete
 2. "ಹೂವ ಕೊಂದದ್ದು ದುಂಬಿ " concept ತುಂಬಾ ಸೊಗಸಾಗಿದೆ. ಪ್ರದೀಪ್ ಅವರ ಮಾತಿಗೆ ನನ್ನ ಸಹಮತವಿದೆ.

  ReplyDelete
 3. ಹೂ ದುಂಬಿಗಳ ಪಾಳಯಗಲೋಳಗೊಂದು ಶೀತಲ ಸಮರ. ಪ್ರಶ್ನೆ ಒಂದೇ ಯಾರು ಯಾರಿಗೆ ಕೊಂದದ್ದು? ಇಳಿ ಸಂಜೆಗೂ ತಂಗಾಳಿಯಿಂದ ಹೂ-ದುಂಬಿಗಳ ನೀರಸ ಕಲಹದಿಂದ ವಂಚನೆಯ ಅಪವಾದ. ಮೋಡಗ ಮುನಿದಿವೆ, ಕಪ್ಪೆಗಳ ಬಾಯಿ ಒಣಗಿದೆ.....ಹೂ ದುಂಬಿಗಳ ಪ್ರಣಯ ಪ್ರಸಂಗ ಅನ್ನಲೇ? ಅಥವಾ ಪ್ರಸಂಗದೊಳಗೊಂದು ಪ್ರಣಯವಿತ್ತು ಅನ್ನಲೇ? ಒಬ್ಬರನ್ನೊಬ್ಬರು ಪ್ರೀತಿಸುವುದಕ್ಕಾಗಿ ಆಪಾದಿಸುತ್ತಾ.....ಕವನ ತುಂಬಾ ಚೆನ್ನಾಗಿದೆ. ಚಿಕ್ಕ ತರ್ಕವೂ ತುಂಬಿದೆ.

  ReplyDelete
 4. ತಲೆಗೆ ಗ್ರಾಸ!

  ReplyDelete
 5. ಭರತ್!
  ಕವಿಕಲ್ಪನೆ ಬಹಳ ಇಷ್ಟವಾಯ್ತು!..... ತು೦ಬಾ ಚೆನ್ನಾಗಿದೆ!

  ReplyDelete
 6. ಅವನನ್ನು ಇವಳು ಕೊಂದಳೋ , ಇವಳನ್ನು ಅವನು ಕೊಂದನೋ
  ಒಟ್ಟಿನಲ್ಲಿ ನೀವು ಹೇಳಿದಂತೆ ಲೋಕ ವಿಮುಕ್ತಿಯ ಕಾರ್ಯ ನಡೆಯುತ್ತಾ ಇದೇ.
  “ಒಂದು ಗಂಡು ಹೆಣ್ಣು ಈ ಸೃಷ್ಟಿಯ ಕಣ್ಣು” ಅಂತ ಕವಿಯೊಬ್ಬರು ಹಾಡಿದ್ದಾರಲ್ಲ..
  ತುಂಬಾ ಚೆನ್ನಾಗಿದೆ

  ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩