ನೆರಳು

ಇದ್ದಲಿನ ಕಾರ್ಖಾನೆಯಲ್ಲಿ
ಬಣ್ಣ ಬಣ್ಣದ ಕನಸುಗಳು!!

ಜಾರಿದ ಕಂಬನಿ ಕಪ್ಪು,
ತೋಯ್ದ ಗಲ್ಲ ಕಪ್ಪು,
ಒರೆಸಿಕೊಂಡ ಅಂಗೈ ಕಪ್ಪು;
ಶುಚಿಗೊಳ್ಳುತಿರಬಹುದು ಬಹುಶಃ
ಕಣ್ಗಳು ನಾಳೆಗಳ ಗುರುತಿಗೆ!!

ಕನಸು ನಿಜವಾಗಬಹುದೆಂಬ
ಕನಸುಗಳು ಈನಡುವೆ 
ಇಮ್ಮಡಿಗೊಳ್ಳುತ್ತಿವೆ;
ತಡೆಯುವುದಂತೂ ದೂರದ ಮಾತು!!

ನನ್ನ ಜೊತೆಗಾರರೆಲ್ಲರೂ ಕೃಷ್ಣರು
ಬಣ್ಣ್ದ ಹಿಂದಿನ ತೊಗಲಿಗೆ 
ಇನ್ನೂ ಈ ಲೋಕದ ಕರಾಳ ಮುಖ
ಅಪರಿಚಿತ ಎಂಬುದು ನಿರಾಳದ ಸಂಗತಿ 

ನೀರೆರಚಿಕೊಂಡರೆ ಒಂದು ದಿನ
ದಿನಾಲೂ ಬಯಸುವುದು ಕನ್ನಡಿ
ಅಂತೆಯೇ ಬಿಂಬಿಸಲು;
ಆದ್ದರಿಂದಲೇ ನಾವು ನೀರಿನಿಂದ
ಅದರ ಬಿಂಬದಿಂದಲೂ ದೂರ!!

ನಾವು ಅಸಹಾಯಕರು
ನಮ್ಮ ಮೈ ಮೇಲಿನ ಧೂಳನ್ನ ಒದರಿಕೊಂಡರೆ
ನಮಗಷ್ಟೇ ಅಲ್ಲ
ಸುತ್ತಲಿನವರಿಗೂ ಘಾಸಿ;
ನಮ್ಮ ಅಳುವಿನಿಂದ ಯಃಕಶ್ಚಿತ್
ಒಂದೂ ಉಪಕಾರವಿಲ್ಲ ಯಾರಿಗೂ!!

ಬಣ್ಣಗಳು ಕಾಣುತಿವೆ
ಭೇದವಾಗಿ ಉಳಿದು.
ಕಣ್ಗುಡ್ಡೆ ನನ್ನ ಜಾತಿ
ಸುತ್ತಲ ಬಿಳಿ ನನ್ನದಲ್ಲ್ಲ!!

ಅತ್ತು ಇನ್ನಷ್ಟು ಸಾರಿಸಿದರೂ
ಕೆಂಪು ತುಟಿಗಳಂತೂ ಚುಂಬಿಸುವುದಿಲ್ಲ
ಅವೂ ಕಪ್ಪೇ!! ಸರಿ ಹೊಂದುತಾವೆ
ನಮ್ಮ ತರಂಗಗಳ ಏರಿಳಿತಕ್ಕೆ!!

ಕಪ್ಪು ನನ್ನ ನೆಚ್ಚಿನ ಬಣ್ಣ 
ನಾ ನೆಚ್ಚಿಕೊಂಡದ್ದನ್ನೆಲ್ಲ 
ಕಿತ್ತುಕೊಂಡಿದ್ದಾನೆ ಬಗವಂತ;
ಸುಳ್ಳು!! ನಾನಿನ್ನೂ ಕಪ್ಪಗಿದ್ದೇನೆ....

                           --ರತ್ನಸುತ

Comments

  1. ಯಾಕೋ ತಮ್ಮ ಈ ಕವಿತೆ ಓದುತ್ತಿದ್ದರೆ, ನನಗೆ ಮೊದಲು ನೆನಪಾದದ್ದು ಬಾಲ ಕಾರ್ಮಿಕರು ಮತ್ತು ಅವರ ಮುರಿದ ಬಣ್ಣದ ಕನಸುಗಳು. :(

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩