ಮೊದಲ ಪ್ರೇಮ ಪತ್ರ ಬರೆದು!!

ಚಿತ್ತು ಹೊಡೆದು, ಹರಿದು 
ಉಂಡೆ ಮಾಡಿದ ಹಾಳೆಗಳೆಷ್ಟೋ 
ಚೆಲ್ಲಾಡಿದ್ದವು ಕೋಣೆ ತುಂಬ, 
ಕಸದ ಬುಟ್ಟಿಯ ಸಹವಾಸ ಬೇಡದೆ 
ಮತ್ತೆ ಹರಡಿಸಿಕೊಳ್ಳುವ ತವಕದಲ್ಲಿ 
 
ಮೊದಲೆಲ್ಲೋ ಬರೆದ ಸಾಲು 
ಇಷ್ಟವಾಗತೊಡಗಿತ್ತು ನಂತರಕೆ 
ಆಗ ಎಸೆದೆ, ಈಗ ನೊಂದೆ 
ಮತ್ತೆ ಹಡೆಯುವಲ್ಲಿ ನಿಶಕ್ತನಾಗಿ 
ಗುರುತು ಹಚ್ಚೆ ಹೊರಟೆ 
 
ನಿರ್ಭಾವುಕ ಹೆಣಗಳಂತೆ ಕಂಡ 
ಭಾವನೆಗಳ ಹುದುಗಿಸಿಟ್ಟ 
ನಿಷ್ಕಳಂಕ ಮೌನ ಹೊದ್ದ 
ನನ್ನ ಕೂಸುಗಳ ಕೊರಳು ಬಿಗಿದಿತ್ತು 
ನನ್ನ ಕರುಳು ಕಿವುಚಿತ್ತು 
 
ಕರಗಿದ ಕಣ್ಣುಗಳು ಬಿಟ್ಟ 
ಸುಕ್ಕುಗಳ ಮೇಲೆ ಬರೆದಾಗ
ಹಾಳೆಗೂ ಎಲ್ಲಿಲ್ಲದ ಸಂಕಟ 
ಥೇಟು ನನ್ನದೇ ಸ್ಥಿತಿ ಅವುಗಳಿಗೂ;
ಒಪ್ಪಂದಕೆ ಮುಂದಾದವು 
 
ಬೆತ್ತಲಾದವೆಲ್ಲ ಅಕ್ಷರಗಳು 
ಚೆಲ್ಲಿಕೊಂಡ ಬೆರಳಿನೆದುರು 
ಹರಿಸಿದಂತೆ ಹರಿದು, ಬಿರಿದು 
ಒಂದೇ ಓಟಕೆ ಕಂಡಿವು
ತೊದಲ ನಡುಕ, ಕೊನೆಯ ತಿರುವು 
 
ಹೊರಳಿ ನೋಡಿದೆ 
ಕಾಗದ ಉಂಡೆಗಳೆಲ್ಲವೂ ಮಾಯ;
ವಿಲೀನದ ಸೂಚನೆಯೋ?
ಕಳುವಿನ ಸೂಚನೆಯೋ?
ಗೋಜಲಿನ ಒಗಟು!!
 
ಅಂತೂ
ಪತ್ರ ಮುಗಿಸುವ ಹೊತ್ತಿಗೆ
ಬೆಳಕಿಗೂ ಮಂಪರು
ಹಚ್ಚಿಟ್ಟ ದೀಪದ ಹಣತೆ
ಇಣುಕಿಣುಕಿ ನೋಡುತ್ತಿತ್ತು
ಹುಸಿ ಗಾಳಿಯ ಬೆನ್ನು ಹತ್ತಿ

ನಾಳೆಯ ಕಂಪನಕೆ 
ಅಲುಗಾಡಿ ಬಿರಿಯದಿದ್ದರೆ ಸಾಕು 
ಪತ್ರ ಹಾಗು ಈ ಹೃದಯ!!

                         -- ರತ್ನಸುತ

Comments

  1. ಈ ಕವನವು ನಮ್ಮನ್ನು ಮರಳಿ ವಸಂತಕೆ ಕೊಡೊಯ್ತು.
    ಇಸ್ಕೂಲು ದಿನಗಳಲ್ಲಿ ಕಾಲೇಜು ದಿನಗಳಲ್ಲಿ ಪದ್ದು ಮೀನಾಕ್ಷಿ ಜಲ್ಜಾ ಇಶಾಲೂ ಲಲ್ತಾಗೆಲ್ಲ ಬರೆದ ಲವ್ ಲೆಟರ್ರುಗಳೆಲ್ಲ ನೆನಪಾದವು.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩