ಹೀಗೆಲ್ಲ ಅನಿಸುವುದು !!

ಹಾಗೊಮ್ಮೆ, ಹೀಗೊಮ್ಮೆ ಇಣುಕಬೇಕು 
ಹೃದಯ 
ಕೈ ಜಾರಿ ಬಿಡಬಹುದು 
ಮೆಲ್ಲ-ಮೆಲ್ಲ 
ಅಲ್ಲೊಮ್ಮೆ, ಇಲ್ಲೊಮ್ಮೆ ಹುಡುಕಬೇಕು
ಕನಸು 
ನಿನ್ನನ್ನು ಹೊರತಾಗಿ 
ಬೇಡುತಿಲ್ಲ 
 
ಏನೆಲ್ಲಾ ಕಥೆಯನ್ನು ಹೇಳಬೇಕು
ಮನಸು 
ಮಗುವಂತೆ ಮುದ್ದಾಗಿ 
ಮಲಗಲೆಂದು 
ಮಿಕ್ಕಂತೆ ಮಾತುಗಳು ಸೋಲಬೇಕು
ಮೌನ 
ತನ್ನ ಪಾಡಿಗೆ ತಾನು 
ಮೆರೆಯಲೆಂದು 

ನಕ್ಕಾಗ ನಗುವಲ್ಲಿ ಮುಳುಗಬೇಕು 
ಬುದ್ಧಿ 
ಕಳೆದಂತೆ ನಾನಲ್ಲಿ 
ಮಗ್ನಗೊಂಡು 
ಸಿಕ್ಕಾಗ ಸೆರೆಯಲ್ಲಿ ಸಿಲುಕಬೇಕು
ಒಮ್ಮೆ 
ಮರುಳಾಗಿ ಮತ್ತೊಮ್ಮೆ 
ಅರಿತುಕೊಂಡು 
 
ಗಾಯಾಳು ನಾನಾಗಿ ನರಳಬೇಕು 
ನೋವು 
ಮರೆಸೋಕೆ ನೀನಲ್ಲಿ 
ಬರುವ ಹಾಗೆ 
ನಾ ಕೇಳೋ ಪ್ರಶ್ನೆಗಳು ಮಾಡಬೇಕು 
ನಿನ್ನ 
ಚಿಂತೆಯ ಸಂತೆಯಲಿ 
ಬಿಟ್ಟ ಹಾಗೆ 
 
ಮತ್ತೊಮ್ಮೆ ನಾ ಹಾಡು ಗೀಚಬೇಕು 
ನೀನು 
ಕೋಪಕ್ಕೆ ತುತ್ತಾಗಿ 
ಹರಿದು ಬಿಡಲು 
ನೀನೊಮ್ಮೆ ನನ್ನನ್ನು ಕಚ್ಚಬೇಕು 
ಗಿಳಿಯು 
ರುಚಿ ಕಂಡ ಸೀಬೆ
ನಾನಾಗಿ ಬಿಡಲು 
 
ಬಾನಲ್ಲಿ ಜೊತೆಯಲ್ಲಿ ಹಾರಬೇಕು 
ಒಮ್ಮೆ
ಕ್ಷಿತಿಜಕ್ಕೂ ಅಚ್ಚರಿಯ 
ತರಿಸುವಂತೆ 
ಮೋಡದಲಿ ಮನೆಯೊಂದ ಮಾಡಬೇಕು 
ಅಲ್ಲಿ
ವಿರಹಕ್ಕೆ ಪರಿಹಾರ 
ಸಿಕ್ಕಿದಂತೆ!!
 
                                     -- ರತ್ನಸುತ

Comments

  1. ಹಲವು ಭಾವಗಳ ಸಮ್ಮಿಲನ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩