Monday 31 March 2014

ಜೀವ ಪಟ

ನಾ ಹಾರಿಸಿದ ಗಾಳಿಪಟ
ನಿನ್ನ ಏದುಸಿರಿಗೆ ಸಿಕ್ಕಿ
ಗೋತ ಹೊಡೆಯುತಿದೆ
ವಿಪರೀತಕ್ಕೆಂದೂ ಪಳಗದಂತೆ

ಆಯ ತಪ್ಪಿ ಬಿದ್ದದ್ದು
ನಿನ್ನ ಉಪ್ಪರಿ ಮೇಲೆ;
ಪಟದ ಕಣ್ಣುಗಳೆರಡೂ 
ತೆರೆದುಕೊಂಡೇ ಇವೆ ಸತ್ತಲ್ಲಿಯೂ!!

ನೀ ಲೂಟಿಗೈಯ್ಯಬೇಕು
ಸೂತ್ರಕೆ ಬಿಗಿದ ನೂಲ;
ರಭಸದಲಿ, ನನ್ನ ಕೈ ಬೆರಳು ಸೀಳಿ 
ನೆತ್ತರು ನಿನ್ನ ಅಂಗೈಯ್ಯ ಮೆತ್ತ ಬೇಕು!!

ಬಾಲಂಗೋಚಿಯ ಕಿತ್ತು
ಗಾಳಿಗೆ ತೂರುವಾಗ
ನಾ ನಿನ್ನ ಹೊರತಾಗಿ ತೇಲುವ
ಅರಿವು, ನಿನಗಾಗಬೇಕು!!

ಕೊನೆಯಿಂದ ಕೊನೆವರೆಗೆ
ಚಾಚಿದ ನಡುಗಡ್ಡಿ
ಬಾಗಿದ ಬಿಲ್ಗಡ್ಡಿಗಳೆರಡೂ 
ಸಂಧಿಸಿದ ತಾಣ
ನಮ್ಮ ಗುರುತು!!

ಗುಟ್ಟಿನಕ್ಷರಗಳ 
ಗಟ್ಟಿ ಮನಸಲಿ ಬರೆದು
ಮುಟ್ಟಿಸಾಗಿದೆ ಇನ್ನು
ನೀ ಪಟಿಸುವಾಟ!!

ಒಪ್ಪಿದರೆ ಮುಗಿಲಿಗೆ
ಮತ್ತೊಮ್ಮೆ ಹಾರಿಸು
ತಪ್ಪನಿಸಿದರೆ ಹರಿದು
ಸಿಟ್ಟನ್ನು ಸೂಸು!!

ಮುಗಿಲ ಮುಟ್ಟುವ ಅದಕೆ
ಜೀವ ಪಟವೆಂದೆಸರು
ನಿನ್ನ ಕೈಲೆನ್ನ ಜೀವ 
ನಲ್ಲೆ, ಹುಷಾರು!!

            -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...